ಕೊಪ್ಪಳ: ಜಿಲ್ಲೆಯಲ್ಲಿ ಜೂ.28 ರಿಂದ ಜು.1ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಮಗು ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಇದನ್ನು ಪ್ರತಿಯೊಬ್ಬ ಅಧಿಕಾರಿ ತನ್ನ ಹೊಣೆಗಾರಿಕೆಯಾಗಿಸಿಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಜಿಲ್ಲೆಯಲ್ಲಿ ಜೂ.28 ರಿಂದ ಜು.1ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಬೇಕು. ಪೋಲಿಯೋ ನಿರ್ಮೂಲನೆ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಯಾವುದೇ ಕಾರಣಕ್ಕೂ ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂದು ಸೂಚನೆ ನೀಡಿದರು.
ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಪ್ರದೇಶ , ಸ್ಲಂಗಳು, ವಲಸೆ ಕಾರ್ಮಿಕರ ವಸತಿ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕು. ಅಂಗನವಾಡಿಗಳಿಗೆ ಬರುವ ತಾಯಂದಿರಿಗೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿವಳಿಕೆ ನೀಡಬೇಕು. ಶಾಲಾ ಮಕ್ಕಳಿಂದ ಪೋಲಿಯೋ ಲಸಿಕೆ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ಶಾಲೆಗಳು, ಧಾರ್ಮಿಕ ಸ್ಥಳ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಪೋಷಕರಿಗೆ ಲಸಿಕೆಯ ಮಹತ್ವ ತಿಳಿಸಬೇಕು. ಹಾಗೂ ಬಸ್ ನಿಲ್ದಾಣಗಳಲ್ಲಿ 3 ದಿನಗಳ ಕಾಲ ಲಸಿಕೆ ಹಾಕಿಸುವಂತೆ ಪ್ರಕಟಣೆ ಹೊರಡಿಸಬೇಕು. ಜನರಲ್ಲಿ ಯಾವುದೇ ಅಪನಂಬಿಕೆ ಇದ್ದರೆ ಅದನ್ನು ಸೂಕ್ತ ತಿಳಿವಳಿಕೆ ನೀಡುವ ಮೂಲಕ ಹೋಗಲಾಡಿಸಬೇಕು. ಈ ಕಾರ್ಯಕ್ರಮ ಆರೋಗ್ಯ ಇಲಾಖೆಯೊಂದರ ಕೆಲಸವಲ್ಲ. ಎಲ್ಲ ಇಲಾಖೆ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಲಿಂಗರಾಜು ಟಿ. ಮಾತನಾಡಿ, ಜೂ.28 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿಗದಿತ ಬೂತ್‌ಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ.ಜೂ.29 ರಿಂದ ಜು.1 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಇದರೊಂದಿಗೆ ಜೂ.28 ರಿಂದ ಜು.1ರವರೆಗೆ ವಲಸೆ ಕಾರ್ಮಿಕರ ವಸತಿ ಪ್ರದೇಶ, ಕಾರ್ಖಾನೆ ಕಾರ್ಮಿಕರ ಬಿಡಾರಗಳಿಗೆ ಭೇಟಿ ನೀಡಿ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಕಾರ್ಯಕ್ರಮದ ಯಶಸ್ವಿಗೆ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.