ಕನ್ನಡಪ್ರಭ ವಾರ್ತೆ ಹಾಸನ

ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಪ್ರಾಚೀನ, ಶ್ರೀಮಂತ ಹಾಗೂ ಮೌಲ್ಯಾಧಾರಿತ ಸಂಸ್ಕೃತಿಯಾಗಿದೆ. ತಾಯಿಯ ಋಣ, ಗುರುಗಳ ಗೌರವ, ಹಿರಿಯರ ಬಗ್ಗೆ ಆದರ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದ ದೇಶ ಭಾರತ. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬೇಬಿ ಮಠ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮತ್ತು ಯುವಜನರು ಸಾಹಿತ್ಯದಿಂದ ದೂರವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಪುಸ್ತಕ ಓದುವ ಅಭ್ಯಾಸ ಹೆಚ್ಚಿದಷ್ಟೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಚುಟುಕು ಸಾಹಿತ್ಯವು ಕಡಿಮೆ ಪದಗಳಲ್ಲಿ ಆಳವಾದ ಅರ್ಥ, ಬದುಕಿನ ಮೌಲ್ಯಗಳು ಹಾಗೂ ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಕ್ತಿಯುಳ್ಳ ಸಾಹಿತ್ಯ ಪ್ರಕಾರವಾಗಿದೆ. ಆದ್ದರಿಂದ ಶಾಲಾಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವೆ ಲೀಲಾವತಿ ಆರ್‌. ಪ್ರಸಾದ್ ಮಾತನಾಡಿ, ಸಂಸ್ಕಾರವು ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಧಿಕಾರ, ಹಣ, ವಿದ್ಯೆ ಅಥವಾ ಹುದ್ದೆಗಿಂತ ಮಾನವೀಯ ಮೌಲ್ಯಗಳು ಅತ್ಯಂತ ಶ್ರೇಷ್ಠವಾಗಿವೆ. ಉತ್ತಮ ಸಂಸ್ಕಾರವನ್ನು ಯಾವುದೇ ವಿಶ್ವವಿದ್ಯಾಲಯ ಕಲಿಸಲು ಸಾಧ್ಯವಿಲ್ಲ. ಅದು ಕುಟುಂಬ, ಸಮಾಜ ಮತ್ತು ಉತ್ತಮ ಸಾಹಿತ್ಯದ ಮೂಲಕವೇ ವ್ಯಕ್ತಿಯಲ್ಲಿ ಬೆಳೆಯುತ್ತದೆ. ಇಂದಿನ ಪೀಳಿಗೆ ಮಾನವೀಯತೆ, ಪರಸ್ಪರ ಗೌರವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದರು.ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸರ್ವಾಧ್ಯಕ್ಷ ಡಾ. ರತ್ನ ಹಾಲಪ್ಪಗೌಡ ಮಾತನಾಡಿ, ಚುಟುಕು ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದ್ದು, ಕಡಿಮೆ ಪದಗಳಲ್ಲಿ ಗಾಢವಾದ ಅರ್ಥವನ್ನು ನೀಡುವ ಶಕ್ತಿ ಹೊಂದಿದೆ. ಇಂತಹ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಜನರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕನ್ನಡ ಭಾಷೆ, ನಾಡುನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಾಹಿತ್ಯ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಸಾಹಿತ್ಯ ಸಮಾಜದ ಕನ್ನಡಿ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು, ಮೌಲ್ಯಗಳು ಹಾಗೂ ಜನಜೀವನವನ್ನು ಸಾಹಿತ್ಯ ಪ್ರತಿಬಿಂಬಿಸುತ್ತದೆ. ಚುಟುಕು ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ, ನೈತಿಕ ಮೌಲ್ಯಗಳು ಹಾಗೂ ಜೀವನ ಸಂದೇಶಗಳನ್ನು ಜನರಿಗೆ ಸುಲಭವಾಗಿ ತಲುಪಿಸಬಹುದು. ಹೊಸ ತಲೆಮಾರಿನ ಲೇಖಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಸಮ್ಮೇಳನದಲ್ಲಿ ಚುಟುಕು ಸಾಹಿತ್ಯದ ನಾಲ್ಕು ಕೃತಿಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕವಿಗಳು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ನಂತರ ನಡೆದ ಚುಟುಕು ಸಾಹಿತ್ಯ ಗೋಷ್ಠಿಯಲ್ಲಿ ಹಲವು ಕವಿಗಳು ತಮ್ಮ ಚುಟುಕು ಕವಿತೆಗಳನ್ನು ವಾಚಿಸಿ ಮೆಚ್ಚುಗೆ ಪಡೆದರು. ಸಾಹಿತ್ಯದ ವಿವಿಧ ಆಯಾಮಗಳ ಕುರಿತು ವಿಚಾರ ವಿನಿಮಯವೂ ನಡೆಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಗಡೂರು ಶಿವಾನಂದ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೋಡು, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ. ಲೋಕೇಶ್, ಗೌರವಾಧ್ಯಕ್ಷ ರಾಜೇಂದ್ರ ದೊಡ್ಡಮಗ್ಗೆ, ಪ್ರೊ. ಕೆ. ಲೋಲಾಕ್ಷಿ, ಡಾ. ವಿ. ಮಹೇಶ್, ಅಪ್ಪಣ್ಣ ಮೇಟಿಗೌಡ, ಆಕಾಶವಾಣಿ ನಿವೃತ್ತ ನಿರ್ದೇಶಕಿ ನಿರ್ಮಲ ಎಲಿಗಾರ್‌, ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕೆ.ಎಸ್. ಮಂಜುಪಂಡಿತ್, ಡಾ. ಚೇತನ ಎಚ್. ವಿ, ಪ್ರಭಾತ್ ಕುಮಾರ್ ಶೆಟ್ಟಿ, ಶೋಭಾ ನಾಯಕ್, ಪೂರ್ಣಿಮಾ ನಾಯಕ್, ಮಲ್ಲೇಶ್ ಜಿ., ಗೀತಾ ವಿ. ಆರ್‌, ಎಚ್.ಬಿ. ಕುಮಾರ್, ಗೀರಿಜಾ ನಿರ್ವಾಣಿ, ಕೊಟ್ರೇಶ್ ಉಪ್ಪಾರ್, ಶೋಭಶೇಖರ್‌, ಧನಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.