- ರಾಮಘಟ್ಟದ ದುರ್ಗಮ್ಮ ಸಾವು । ಹರಪನಹಳ್ಳಿ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯ ನಗರ ಜಿಲ್ಲೆ ಹರಪನಹಳ್ಳಿಯ ರಾಮಘಟ್ಟ ಗ್ರಾಮದ ದುರ್ಗಮ್ಮ (20) ಮೃತ ದುರ್ದೈವಿ. ಜೂನ್ 11ರಂದು ಹೆರಿಗೆಗೆಂದು ದುಗ್ಗಮ್ಮ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಿಝೇರಿಯನ್ ಮೂಲಕ ಸ್ಥಳೀಯ ವೈದ್ಯರು ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗುವಿಗೆ ಜನನ ಆಗಿತ್ತು. ಆಪರೇಷನ್ ಬಳಿಕ ರಾತ್ರಿಯಿಡೀ ದುರ್ಗಮ್ಮ ನೋವಿನಿಂದ ಬಳಲುತ್ತಿದ್ದರು. ಆದರೂ, ವೈದ್ಯಕೀಯ ಸಿಬ್ಬಂದಿ ಸ್ಪಂದಿಸಲಿಲ್ಲ ಎಂಬುದು ಕುಟುಂಬಸ್ಥರು ಆರೋಪ.
ದುರ್ಗಮ್ಮ ಅವರನ್ನು ಗುರುವಾರ ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಹರಪನಹಳ್ಳಿ ಆಸ್ಪತ್ರೆ ವೈದ್ಯರು ಸೂಚನೆ ನೀಡಿದ್ದರು. ಅದರಂತೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ದುಗ್ಗಮ್ಮ ಅವರ ಗರ್ಭಕೋಶದಲ್ಲಿ ರಕ್ತಸ್ರಾವ ಬಗ್ಗೆ ಪತ್ತೆಯಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ, ದಾವಣಗೆರೆ ಜಿಲ್ಲಾಸ್ಪತ್ರೆ ವೈದ್ಯರು ಗರ್ಭಕೋಶವನ್ನು ತೆಗೆದಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಿಸದೇ ದುರ್ಗಮ್ಮ ಸಾವನ್ನಪ್ಪಿದ್ದಾರೆ.ಮಗಳ ಕಳೆದುಕೊಂಡು ತಾಯಿ, ಕುಟುಂಬಸ್ಥರು, ಎರಡು ದಿನಗಳ ಹಸುಗೂಸು ಹಿಡಿದು ಕಣ್ಣೀರು ಹಾಕುತ್ತಿದ್ದಾರೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಹರಪನಹಳ್ಳಿ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
- - -(ಬಾಕ್ಸ್) * ಗರ್ಭಕೋಶದಲ್ಲಿ ರಕ್ತಸ್ರಾವದಿಂದ ಸಾವು: ಡಾ.ನಾಗೇಂದ್ರಪ್ಪ
ದಾವಣಗೆರೆ: ರಾಮಘಟ್ಟದ ದುಗ್ಗಮ್ಮ ಸಿಝೇರಿಯನ್ ಹೆರಿಗೆ ಬಳಿಕ ಗರ್ಭಕೋಶದಲ್ಲಿ ರಕ್ತಸ್ರಾವ ಆಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ಚಿಗಟೇರಿ ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಂ.ಬಿ. ನಾಗೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.ಹರಪನಹಳ್ಳಿ ಆಸ್ಪತ್ರೆ ವೈದ್ಯರಿಂದ ರೆಫರ್ ಮೇರೆಗೆ ಗುರುವಾರ ಮಧ್ಯಾಹ್ನ 12.30ಕ್ಕೆ ದುರ್ಗಮ್ಮ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ದಾವಣಗೆರೆಗೆ ಬರುವಷ್ಟರಲ್ಲಿ ಬಾಣಂತಿ ಶಾಕ್‌ಗೆ ಒಳಗಾಗಿದ್ದರು, ಅವರ ಬಿ.ಪಿ. ಡ್ರಾಪ್ ಆಗಿತ್ತು. ಸ್ಕ್ಯಾನಿಂಗ್ ವೇಳೆ ಸಿಝೇರಿಯನ್ ಬಳಿಕ ಹೊಟ್ಟೆಯಲ್ಲಿ ರಕ್ತಸ್ರಾವ ಆಗಿದ್ದು ಗೊತ್ತಾಗಿ, ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿ ಗರ್ಭಕೋಶ ತೆಗೆದುಹಾಕಿದ್ದೇವೆ ಎಂದು ಹೇಳಿದರು.
ಬಾಣಂತಿಗೆ ಸುಮಾರು ಐದು ಬಾಟಲ್ ಬ್ಲಡ್, 15 ಯೂನಿಟ್ ಬ್ಲಡ್ ಪ್ಲೆಟಲೇಟ್ಸ್ ಕೊಟ್ಟಿದ್ದೇವೆ. ಆದರೂ ಬೆಳಗಿನ ಜಾವ 1 ಗಂಟೆಗೆ ಗರ್ಭಿಣಿ ಮೃತಪಟ್ಟಿದ್ದಾರೆ. ರಾಜ್ಯಮಟ್ಟದಿಂದ ಬಾಣಂತಿ ಸಾವಿನ ಬಗ್ಗೆ ವಿಚಾರಣೆ ಆಗುತ್ತೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗುತ್ತೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಎಂ.ಬಿ. ನಾಗೇಂದ್ರಪ್ಪ ತಿಳಿಸಿದರು.- - -
(-ಪೋಟೋಗಳಿವೆ)