ಶಂಕರ ಕುದರಿಮನಿ
ಚಾಲುಕ್ಯರ ನಾಡಿನ ಆರಾಧ್ಯ ದೇವತೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿದೇವತೆ ಎನಿಸಿಕೊಂಡಿರುವ, ರಾಜ್ಯ ಹೊರ ರಾಜ್ಯಗಳಲ್ಲಿ ಕೋಟ್ಯವಧಿ ಭಕ್ತರನ್ನು ಹೊಂದಿರುವ ಆದಿಶಕ್ತಿ ಬಾದಾಮಿಯ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯ ವಿಜೃಂಭನೆಯಿಂದ ಜರುಕಿತು. ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಹೂವು ಸಮರ್ಪಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ನಿರಂತರ ಒಂದು ತಿಂಗಳ ಕಾಲ ಜರುಗುವ ಜಾತ್ರೆಯ ಸವಿಯೇ ವಿಶಿಷ್ಟವಾದುದು.
ಇದಕ್ಕೆ ಸೇರಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು. ಬನಶಂಕರಿ ದೇವಿ ಗುಡಿಯ ಪೂಜಾರ ಮನೆತನದವರಿಂದ ಬೆಳಗ್ಗೆ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಮತ್ತು ರಥಾಂಗ ಹೋಮ ನಡೆದು, ಸಂಜೆ 5 ಗಂಟೆಯ ಹೊತ್ತಿಗೆ ಸಹಸ್ರಾರು ಭಕ್ತರು ದೇವಿಯ ನಾವಸ್ಮರಣೆಯೊಂದಿಗೆ ರಥವನ್ನು ಎಳೆದು ಹೂವು, ಹಣ್ಣು ಕಾಯಿ ಅರ್ಪಿಸುವುದರ ಮೂಲಕ ರಥೋತ್ಸವವು ಸಾಂಗವಾಗಿ ನೆರವೇರಿಸಿ ಬನದ ಸಿರಿಯಲ್ಲಿ ಜಾತ್ರೆಯ ಐಸಿರಿ ಸೊಬಗನ್ನು ಬಿಂಬಿಸಿತು.ಇದಕ್ಕಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭಕ್ತ ವೃಂದವು ಪ್ರತಿವರ್ಷದಂತೆ ಈ ವರ್ಷವು ಧಾರ್ಮಿಕ ಪದ್ಧತಿಯಂತೆ ದೇವಿ ತೇರಿನ ಹಗ್ಗವನ್ನು ಸಿಂಗಾರಗೊಂಡಿದ್ದ ಹಳ್ಳಿ ಬಂಡಿಯಲ್ಲಿ ಕಾಲ್ನಡಿಗೆ ಮೂಲಕ ತೆಗೆದುಕೊಂಡು ಬಂದು ರಥೋತ್ಸವಕ್ಕೆ ಸಮರ್ಪಿಸಿದರು.ಬನಶಂಕರಿಯ ಸ್ಥಳದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳ ಮುಗಿಲು ಮುಟ್ಟುವಂತಿತ್ತು. ಹೂವು, ಹಣ್ಣು, ಕಾಯಿ, ಕರುಪರ ಅರ್ಪಿಸುವುದರ ಜತೆಗೆ ಬಾಳೆಹಣ್ಣು, ಉತ್ತತ್ತಿಗಳನ್ನು ರಥೋತ್ಸವದಲ್ಲಿ ತೂರಿ ಭಕ್ತಿ-ಭಾವವನ್ನು ಮೆರೆದರು.
ಬೆಳ್ಳಂಬೆಳಗು ಪ್ರದರ್ಶಿಸುವ ನಾಟಕ ಕಂಪನಿಗಳು ಬೇರೆ, ಬೇರೆ ಊರುಗಳಿಂದ ಬಳೆ ವ್ಯಾಪಾರಿಗಳು ಬಂದು, ಈ ಜಾತ್ರೆಯಲ್ಲಿ ದೊಡ್ಡದಾದ ಬಳೆಯ ಮಳಿಗೆಯನ್ನೇ ಸೃಷ್ಟಿ ಮಾಡಿದ್ದಾರೆ. ಅಲ್ಲಿರುವ ವಿವಿಧ ತರಹದ ಬಳೆಗಳನ್ನು ನೋಡುವುದೇ ಹೆಣ್ಣು ಮಕ್ಕಳಿಗೊಂದು ಸಂಭ್ರಮ. ಅದರಂತೆ ಅರಿಷಿಣ-ಕುಂಕುಮದ ಸಾಲು ಅಂಗಡಿಗಳು ಜಾತ್ರೆಗೆ ಕಳೆ ತಂದು ಕೊಟ್ಟಿದ್ದವು.ದೇವಿ ಸನ್ನಿಧಾನಕ್ಕೆ ಬರುವ ಜನ ಬಳೆ, ಕುಂಕುಮ ತೆಗೆದುಕೊಂಡು ಜಾತ್ರೆಯ ಸವಿ ನೆನಪಿನಲ್ಲಿ ತಮ್ಮೂರಿಗೆ ಸಾಗಿ ಆ ಸವಿಯನ್ನು ಎಲ್ಲರಿಗೂ ಹಂಚುತ್ತಾರೆ. ರಥೋತ್ಸವದಲ್ಲಿ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಹಿಸಿದ್ದರು.