ದಕ್ಷಿಣಕಾಶಿ ಶಿವಗಂಗೆ ಪುಣ್ಯಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಮಂಗಳವಾರ ನಡೆಯಲಿದೆ. ಶಿವಗಂಗೆಯ ಬೆಟ್ಟದ 4547 ಅಡಿಯ ತುತ್ತತುದಿಯಲ್ಲಿ, ಮಂಗಳವಾರ ತೀರ್ಥಕಂಬದಲ್ಲಿ ಗಂಗೋತ್ಪತ್ತಿಯಾಗಿ ನಂತರ ದೈವಜಲವನ್ನು ತಂದು ಶ್ರೀ ಗಂಗಾಧರೇಶ್ವರ ಸನ್ನಿಯ ಗಿರಿಜಾ ಕಲ್ಯಾಣ ಮಂಟಪದಲ್ಲಿ ಶೈವಾಗಮಿಕ ಡಾ.ಎಸ್.ಎನ್.ಸೋಮಸುಂದರ್ ದೀಕ್ಷಿತ್ ತಂಡದಿಂದ ಧಾರಾ ಮಹೋತ್ಸವ ನಡೆಯಲಿದೆ.
ರುದ್ರೇಶ್ ಹೊನ್ನೇನಹಳ್ಳಿಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ದಕ್ಷಿಣಕಾಶಿ ಶಿವಗಂಗೆ ಪುಣ್ಯಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಮಂಗಳವಾರ ನಡೆಯಲಿದೆ. ಶಿವಗಂಗೆಯ ಬೆಟ್ಟದ 4547 ಅಡಿಯ ತುತ್ತತುದಿಯಲ್ಲಿ, ಮಂಗಳವಾರ ತೀರ್ಥಕಂಬದಲ್ಲಿ ಗಂಗೋತ್ಪತ್ತಿಯಾಗಿ ನಂತರ ದೈವಜಲವನ್ನು ತಂದು ಶ್ರೀ ಗಂಗಾಧರೇಶ್ವರ ಸನ್ನಿಯ ಗಿರಿಜಾ ಕಲ್ಯಾಣ ಮಂಟಪದಲ್ಲಿ ಶೈವಾಗಮಿಕ ಡಾ.ಎಸ್.ಎನ್.ಸೋಮಸುಂದರ್ ದೀಕ್ಷಿತ್ ತಂಡದಿಂದ ಧಾರಾ ಮಹೋತ್ಸವ ನಡೆಯಲಿದೆ.ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಟ್ರಸ್ಟ್ ನಿಂದ 25-30 ಸಾವಿರ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಭಕ್ತರನ್ನು ನಿಯಂತ್ರಿಸಲು ಬೀಗಿ ಬಂದೋಬಸ್ತ್‌ಗೆ ಸಿಬ್ಬಂದಿ ನೇಮಿಸಲಾಗಿದೆ, 20 ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಎಎಸ್ಪಿ ನಾಗರಾಜು ಭದ್ರತೆ ವೀಕ್ಷಿಸಲಿದ್ದಾರೆ ಎಂದು ದಾಬಸ್‌ಪೇಟೆ ಆರಕ್ಷಕ ನಿರೀಕ್ಷಕ ಬಿ.ರಾಜು ವಿವರಿಸಿದ್ದಾರೆ.ಬೆಟ್ಟದ ಐತಿಹ್ಯ: ಒಮ್ಮೆ ಅಗಸ್ತ್ಯ ಮುನಿಗಳು ಕೈಲಾಸದಲ್ಲಿ ನಡೆಯುತ್ತಿದ್ದ ಗಿರಿಜಾಕಲ್ಯಾಣ ಮಹೋತ್ಸವವನ್ನು ನೋಡಲು ಬರುತ್ತಾರೆ. ಇವರು ಗಿರಿಜಾ ಮಹೋತ್ಸವಕ್ಕೆ ಆಗಮಿಸುವ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಗಿ ಅಗಸ್ತ್ಯರಿಗೆ ದರ್ಶನ ಸಿಗದಂತಾಗುತ್ತದೆ. ಈ ಸನ್ನಿವೇಶವನ್ನು ಗಮನಿಸಿದ ಪರಶಿವನು ಅಗಸ್ತ್ಯ ಮುನಿಗಳಿಗೆ ನೀವು ಮುಂದಿನ ವರ್ಷ ಕೈಲಾಸಕ್ಕೆ ಬರುವುದು ಬೇಡ ಪ್ರತಿ ವರ್ಷ ದಕ್ಷಿಣಕಾಶಿ ಶ್ರೀ ಶಿವಗಂಗೆಯ ಬೆಟ್ಟದಲ್ಲಿ ಉತ್ತರಾಯಣ ಪುಣ್ಯಕಾಲದ ಶುಭ ದಿನದಂದು ಬೆಟ್ಟದ ತುದಿಯಲ್ಲಿರುವ ತೀರ್ಥಕಂಬದಲ್ಲಿ ತೀರ್ಥೋದ್ಭವವಾಗುತ್ತದೆ. ಈ ತೀರ್ಥದಿಂದಲೇ ಗಿರಿಜಾ ಕಲ್ಯಾಣವನ್ನು ನಡೆಸಿ ಎಂದು ಅಪ್ಪಣೆ ನೀಡುತ್ತಾರೆ. ಅದರಂತೆ ಮಕರ ಸಂಕ್ರಾಂತಿ ಹಬ್ಬದಂದು ಶಿವಗಂಗೆ ಬೆಟ್ಟದ ಮೇಲಿನ ಕಂಬದಲ್ಲಿ ತೀರ್ಥವು ಉದ್ಬವವಾಗುತ್ತದೆ. ಆ ನಂತರ ತೀರ್ಥವನ್ನು ತಂದು ಗಿರಿಜಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ. ಪ್ರತಿ ವರ್ಷ ಶಿವಗಂಗೆಯ ಕ್ಷೇತ್ರದಲ್ಲಿ 2 ಬಾರಿ ದನಗಳ ಜಾತ್ರೆ ನಡೆಯುತ್ತದೆ. ಪ್ರಥಮ ಚಿಕಿತ್ಸೆ, ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕ ಎನ್.ಶ್ರೀನಿವಾಸ್ ಹೂವಿನ ಅಲಂಕಾರ ಕೈಗೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.