ಸಂಡೂರು ಉಪ ಚುನಾವಣೆ ಅಖಾಡ ಪ್ರಚಾರಕ್ಕೆ ರಾಜ್ಯ ನಾಯಕರ ದಂಡು; ರಾಜಕೀಯ ಕಳೆಕಟ್ಟಿದ ಗಣಿನಾಡು

KannadaprabhaNewsNetwork |  
Published : Nov 05, 2024, 12:38 AM IST
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸಂತೋಷ್ ಲಾಡ್ ಪ್ರಚಾರ ನಡೆಸಿದರು.  | Kannada Prabha

ಸಾರಾಂಶ

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಸಂಡೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ.

ವಿಶೇಷ ವರದಿ

ಬಳ್ಳಾರಿ: ಕೈ-ಕಮಲ ಪಕ್ಷಗಳ ಪ್ರತಿಷ್ಠೆಯ ಕಾಳಗವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನದಿನಕ್ಕೆ ರಂಗೇರುತ್ತಿದೆ. ಎರಡು ಪಕ್ಷಗಳ ರಾಜ್ಯ ನಾಯಕರು ಗಣಿನಾಡು ಸಂಡೂರು ಕಡೆ ಮುಖವೊಡ್ಡಿದ್ದು ಅಬ್ಬರದ ಪ್ರಚಾರ ಮತ್ತಷ್ಟೂ ವೇಗ ಸಿಕ್ಕಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಏಳು ದಿನಗಳಷ್ಟೇ ಬಾಕಿ ಉಳಿದಿದ್ದುಕೈ-ಕಮಲ ಬಲಾಢ್ಯ ನಾಯಕರ ಆಗಮನದಿಂದ ಚುನಾವಣಾ ಕಣ ಮತ್ತಷ್ಟೂ ರಾಜಕೀಯ ಮೆರಗು ಪಡೆದಿದೆ.

ಸಂಡೂರಿನಲ್ಲಿ ಬೀಡು ಬಿಟ್ಟ ನಾಯಕರು:

ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಸಂಡೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ರಾಜ್ಯದ ವಿವಿಧ ಭಾಗಗಳ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಾಜಿ ಸಂಸದರು ಸಂಡೂರಿನಲ್ಲಿ ಓಡಾಡಿಕೊಂಡು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಜಾತಿವಾರು ಮುಖಂಡರನ್ನು ಮತಗಳ ವೊಲಿಕೆಯ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ತಮ್ಮ ಜವಾಬ್ದಾರಿ ಊರುಗಳಲ್ಲಿ ಸದ್ದಿಲ್ಲದೆ ಪ್ರಚಾರದಲ್ಲಿ ಕೆಲ ನಾಯಕರು ತೊಡಗಿಸಿಕೊಂಡಿದ್ದಾರೆ. ಕೈ ಪಕ್ಷದ ಶಾಸಕರುಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಸಚಿವರಿಗೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿವಾರು ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಬಿಜೆಪಿಯಲ್ಲಿ ಗ್ರಾಮವಾರು ಪ್ರಚಾರದ ಜವಾಬ್ದಾರಿಯನ್ನು ಆಯಾ ನಾಯಕರಿಗೆ ವಹಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರಮುಖ ನಾಯಕರಾದ ಸಿ.ಟಿ.ರವಿ, ಭಗವಂತ ಖೂಬಾ, ಬಿ.ವೈರಾಘವೇಂದ್ರ ಸೇರಿದಂತೆ ಪಕ್ಷದ ಪ್ರಮುಖರು ಈಗಾಗಲೇ ಪ್ರಚಾರ ನಡೆಸಿ, ಮರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಇಂಧನ ಸಚಿವ ಕೆ.ಜೆ.ಜಾರ್ಜ್, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಬೀದರ್ ಸಂಸದ ಸಾಗರ್ ಖಂಡ್ರೆ ಸೇರಿದಂತೆ ಅನೇಕ ನಾಯಕರು ಈಗಾಗಲೇ ಪ್ರಚಾರ ಮುಗಿಸಿದ್ದಾರೆ. ಸಚಿವ ಸಂತೋಷ್ ಲಾಡ್ ಇಡೀ ಪ್ರಚಾರದ ಉಸ್ತುವಾರಿ ಹೊತ್ತು ಹಗಲುರಾತ್ರಿ ಎನ್ನದೆ ಅಭ್ಯರ್ಥಿ ಜೊತೆ ಕ್ಷೇತ್ರದಾದ್ಯಂತ ತಿರುಗಾಟ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರಾಣಿ ಸೇರಿದಂತೆ ಅನೇಕ ನಾಯಕರು ಸಂಡೂರಿಗೆ ಆಗಮಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

ಸಿದ್ದು, ಖರ್ಗೆ, ಎಚ್‌ಕೆ, ಪರಂ ಆಗಮನ:

ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಪ್ರಚಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಡಿ.ಕೆ. ಸುರೇಶ್, ಎಂ.ಸಿ. ಸುಧಾಕರ್, ಎಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಅನೇಕ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದು, ಎರಡು ಪಕ್ಷಗಳ ಘಟಾನುಘಟಿ ನಾಯಕರ ಆಗಮನದಿಂದ ಸಂಡೂರು ಉಪ ಚುನಾವಣೆ ಪರಸ್ಪರ ವಾಗ್ಬಾಣಗಳ ಮಾತಿನ ಕದನಕ್ಕೆ ವೇದಿಕೆಯಾಗಲಿದೆ.

ಸಂಡೂರು ಉಪ ಚುನಾವಣೆ ಘೋಷಣೆ ಮುನ್ನ ಬರೀ ಮೈನ್ಸ್ ಲಾರಿಗಳ ಸದ್ದು, ಗಣಿಮಣ್ಣಿನ ಧೂಳು ಕಂಡು ಬರುತ್ತಿದ್ದ ಸಂಡೂರಿನಲ್ಲೀಗ ರಾಜಕೀಯ ನಾಯಕರ ಐಷಾರಾಮಿಗಳ ಓಡಾಟ, ಪ್ರಚಾರದ ಭರಾಟೆಯ ದೃಶ್ಯಗಳು ನಿತ್ಯ ದರ್ಶನವಾಗುತ್ತಿದೆ.

ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ವಿಶ್ಲೇಷಣೆ ಜೊತೆಗೆ ಚುನಾವಣೆಯ ರಣಾಂಗಣ ರಂಗೇರಿಸಲು ಯಾವ ನಾಯಕರು ಆಗಮಿಸುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ