ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯುದ್ಧ ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲುವ ಮೂಲಕ ಅಧರ್ಮಕ್ಕೆ ಹೀನಾಯ ಸೋಲಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕುತಂತ್ರ ಅಧರ್ಮ ಹಾಗೂ ಧರ್ಮದ ನಡುವಿನ ಚುನಾವಣೆ ಇದಾಗಿದೆ. ಈ ಬಾರಿ ನಿಖಿಲ್ ಅಭಿಮನ್ಯುವಲ್ಲ. ಅರ್ಜುನನಾಗಿ ಯುದ್ಧ ಎದುರಿಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಹಾಪಡೆ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಕೃಷ್ಣನ ಪಾತ್ರ ವಹಿಸಿ ಅಧರ್ಮವನ್ನು ಹಿಮ್ಮೆಟ್ಟಿಸಲಿದ್ದಾರೆ. ಸಚಿವರ ದಂಡು ಚನ್ನಪಟ್ಟಣದಲ್ಲಿದೆ. ಉಪಮುಖ್ಯಮಂತ್ರಿಗಳು ಇವತ್ತು ಬಂದಿದ್ದಾರೆ, ಎಲ್ಲಾ ಕಡೆ ನಮ್ಮನ್ನು ಬೈದುಕೊಂಡು ಹೋಗುತ್ತಿದ್ದಾರೆ ಎಂದರು.
ಚದುರಂಗ ಆಡಿದವರೆಲ್ಲ ಏನಾದರು?ಚದುರಂಗ ಆಡಿದವರೆಲ್ಲಾ ಮುಳುಗಿದ್ದಾರೆ. ಡಿಕೆಶಿ ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚದುರಂಗದಾಟ ಆಡಿ ಮುಳುಗಿ ಎದ್ದವರ ಇತಿಹಾಸ ಇದೆ. ಎಲ್ಲದಕ್ಕೂ ಅಂತಿಮ ಎನ್ನುವುದು ಇದೆ. ಅವರಂತೆ ಚದುರಂಗ ಆಡಿ ಮಹಾ ಸಾಮ್ರಾಜ್ಯಗಳೇ ಆಗಿಹೋಗಿವೆ. ಮೌರ್ಯ ಸಾಮ್ರಾಜ್ಯ ಸೇರಿ ಅನೇಕ ಸಾಮ್ರಾಜ್ಯಗಳ ಕತೆ ಮುಗಿದು ಹೋಗಿದೆ. ಯಾರೂ ಇಲ್ಲಿ ಶಾಶ್ವತ ಅಲ್ಲ. ಇವರು ಕೂಡ ಶಾಶ್ವತ ಅಲ್ಲ ಎಂದು ಕಿಡಿಕಾರಿದರು.
ಕುತಂತ್ರದಿಂದ ನಿಖಿಲ್ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ, ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಸೋಲಿಸಿದರು. ಇವತ್ತು ಡಿಸಿಎಂ ಹುದ್ದೆಯಲ್ಲಿರುವ ವ್ಯಕ್ತಿ ನಿಖಿಲ್ ಅವರನ್ನು ಕಂದ, ಶಿಶು ಎಂದು ಕರೆಯುತ್ತಿದ್ದಾರೆ. ಆ ಶಿಶುವನ್ನು ಕುತಂತ್ರದಿಂದ ಸೋಲಿಸಿದ್ದು ಯಾರು? ಅಭಿಮನ್ಯು ಕೂಡ ಶಿಶುವೇ ಅಲ್ಲವೇ? ಅರ್ಜುನನನ್ನು ಕುತಂತ್ರದಿಂದ ಬೇರೆಡೆಗೆ ಸಾಗಹಾಕಿ ಅಭಿಮನ್ಯುವನ್ನು ಸೋಲಿಸಿ ಹೇಯವಾಗಿ ಕೊಂದರು. ಅದೇ ರೀತಿ ಮಂಡ್ಯ, ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿದರು. ಈ ಬಾರಿ ನಿಖಿಲ್ ಅಭಿಮನ್ಯುವಲ್ಲ, ಅರ್ಜುನ ಆಗಿದ್ದಾರೆ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕೃಷ್ಣನ ಸ್ಥಾನದಲ್ಲಿ ನಿಂತು ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಚನ್ನಪಟ್ಟಣ ಚುನಾವಣೆ ಮಹಾಭಾರತದ ಕುರುಕ್ಷೇತ್ರವಾಗಿದೆ ಎಂದು ಕುಮಾರಸ್ವಾಮಿ ಬಣ್ಣಿಸಿದರು.
ಧ್ವಜದ ನೆರಳಲ್ಲಿ ಲೂಟಿ ಮಾಡಬಹುದೇ?ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಒಂದು ದಿನವೂ ಧ್ವಜ ಹಾರಿಸಲಿಲ್ಲ ಎಂದು ಡಿಕೆಶಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಸುತ್ತಾಡಿ ನೋಡಿದರೆ ಯಾರು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿದೆ. ಚನ್ನಪಟ್ಟಣ ಮೂಲಸೌಕರ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ವಿಧಾನಸಭೆ ಕ್ಷೇತ್ರ. ಇದಕ್ಕೆ ಕಾರಣ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ. ಬೆಂಗಳೂರಿಗೆ ಹೋಲಿಸಿದರೆ ಚನ್ನಪಟ್ಟಣದ ಹಳ್ಳಿಗಳ ರಸ್ತೆಗಳೇ ಚೆನ್ನಾಗಿವೆ ಎಂದು ಕುಟುಕಿದರು.
ಇಲ್ಲಿ ಬಾವುಟ ಹಾರಿಸುವುದು ಮುಖ್ಯ ಅಲ್ಲ. ಆದರೆ, ನಂಬಿ ಗೆಲ್ಲಿಸಿದ ಜನರ ಋಣ ತೀರಿಸುವುದು ಮುಖ್ಯ. ಇವರು ಬಂದು ಧ್ವಜ ಹಾರಿಸಿ ಭಾಷಣ ಮಾಡಿದರೆ ಜನರ ಹೊಟ್ಟೆ ತುಂಬುವುದಿಲ್ಲ. ಮೇಲ್ನೋಟಕ್ಕೆ ಧ್ವಜಾರೋಹಣ ಮಾಡಿ ಉಳಿದೆಲ್ಲವನ್ನೂ ಲೂಟಿ ಮಾಡಿದರೆ ಹೇಗೆ? ಅಂತಹ ಕೆಲಸವನ್ನು ನಾನು ಮಾಡಿಲ್ಲ. ಹೌದು, ನಾನು ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಧ್ವಜಕ್ಕೆ ನನ್ನ ಗೌರವ ಸಲ್ಲಿಸಿದ್ದೇನೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.(ಫೋಟೋ ಬೇರೆ ಪೈಲಲ್ಲಿದೆ ಹಾಕಿದೀನಿ)