ಸನಾತನ ಧರ್ಮ ಉಳಿಸುವ ಸೇವೆ ಸಾರ್ಥಕತೆ ಪಡೆಯುತ್ತದೆ

KannadaprabhaNewsNetwork |  
Published : Nov 05, 2024, 12:38 AM IST
29 | Kannada Prabha

ಸಾರಾಂಶ

ಹಬ್ಬ- ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕ. ದೀಪಾವಳಿ ಆಚರಣೆಯು ಜ್ಞಾನದ ಸಂಕೇತ

ಕನ್ನಡಪ್ರಭ ವಾರ್ತೆ ಮೈಸೂರು

ಸನಾತನ ಧರ್ಮ ಮತ್ತು ಪರಂಪರೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಸೇವೆ ಸಲ್ಲಿಸಿದರೆ ಅದು ಸಾರ್ಥಕತೆ ಪಡೆಯುತ್ತದೆ ಎಂದು ಉಡುಪಿ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.

ದೀಪಾವಳಿ ಪಾಡ್ಯದ ಅಂಗವಾಗಿ ನಗರದ ಚಾಮರಾಜ ಜೋಡಿ ರಸ್ತೆಯ ಉಡುಪಿ ಶ್ರೀ ಭಂಡಾರಕೇರಿ ಮಠದಲ್ಲಿ ಶನಿವಾರ ರಾತ್ರಿ ತುಳಸಿ ಸಂಕೀರ್ತನೆ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಹಬ್ಬ- ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕ. ದೀಪಾವಳಿ ಆಚರಣೆಯು ಜ್ಞಾನದ ಸಂಕೇತ. ಬದುಕನ್ನು ಬೆಳಗುವ ವಿಶೇಷ ಆಚರಣೆಯಾಗಿದೆ. ರಾಮಾಯಣ, ಮಹಾಭಾರತ ಗ್ರಂಥಗಳೂ ದೀಪಾವಳಿ ಮಹತ್ವವನ್ನು ಬಿಂಬಿಸಿವೆ. ನನ್ನ ಜೀವನ, ನನ್ನ ಕುಟುಂಬ, ನನ್ನ ಸಂಪತ್ತು ಎನ್ನುವುದಕ್ಕಿಂತಾ ನನ್ನ ನೆಲದ ಧರ್ಮ ಮತ್ತು ಆಚರಣೆಗಳು ಯುಗ ಯುಗದವರೆಗೂ ಉಳಿಯಬೇಕು ಎಂಬ ಧ್ಯೇಯವನ್ನು ಹೊಂದಿದ್ದ ವಿಭೀಷಣನಿಗೆ ಬ್ರಹ್ಮದೇವರು ಒಲಿದು ಚಿರಂಜೀವಿ ಪಟ್ಟವನ್ನು ನೀಡಿದರು. ದೇವರಲ್ಲಿ ನಾವು ಕೇವಲ ಲೌಕಿಕ ಸುಖ, ಸಂಪತ್ತು ಬೇಡಿದರೆ ಅದು ಸೀಮಿತವಾಗುತ್ತದೆ. ನಾವು ಬೇಡುವುದಾದರೆ ನಮ್ಮ ಸನಾತನ ಹಿಂದು ಧರ್ಮದ ಸತ್ವ ಉಳಿಯಬೇಕೆಂದು ಬೇಡಬೇಕಾಗಿ ಹೇಳಿದರು.

ನಾವು ಆಡುವ ಪ್ರತಿಯೊಂದು ಮಾತುಗಳೂ ಪವಿತ್ರವಾದವು. ಮನೆಯಲ್ಲಿ , ಸನ್ನಿಧಾನಗಳಲ್ಲಿ ಅಸ್ತು ದೇವತೆಗಳು ನೆಲೆಸಿರುತ್ತಾರೆ. ನಾವು ಆಡುವ ಮಾತು ಸತ್ಯವಾಗಲಿ, ಸಿದ್ಧಿಯಾಗಲಿ ಎಂದು ಅವರು ಅನುಗ್ರಹ ಮಾಡುತ್ತಾರೆ. ಆದಕಾರಣ ಸದಾ ಒಳ್ಳೆಯ ಮಾತನ್ನೇ ಆಡಬೇಕು. ಪ್ರಿಯವಾಗುವ ನುಡಿಗಳೇ ನಮ್ಮಿಂದಾ ಬಂದಾಗ ಮನೆ, ಮನೆತನ, ಕುಟುಂಬ ಮತ್ತು ದೇಶ ಪ್ರಗತಿ ಸಾಧಿಸುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಧನಾತ್ಮಕ ಶಕ್ತಿ ಇರುತ್ತದೆ. ಅದು ದೀಪದಂತೆ ಬೆಳಗಿದಾಗ ಪ್ರತಿ ವ್ಯಕ್ತಿಯೂ ದೇಶಕ್ಕೆ ಆಸ್ತಿ ಆಗುತ್ತಾನೆ. ದೀಪಾವಳಿ ಸಂದರ್ಭ ಸಾತ್ವಿಕ ಶಕ್ತಿಗಳು ಜಾಗೃತವಾಗಲಿ ಎಂದು ಜ್ಯೋತಿ ಬೆಳಗೋಣ ಎಂದು ಅವರು ಸಲಹೆ ನೀಡಿದರು.

ಬಳಿಕ ಅವರು ತುಳಸಿ ಸಂಕೀರ್ತನೆ ಪೂಜೆ, ಶ್ರೀರಾಮದೇವರಿಗೆ ತೊಟ್ಟಿಲು ಸೇವೆ ನೆರವೇರಿಸಿದರು. ಮಠದ ವ್ಯವಸ್ಥಾಪಕ ರಾಘವೇಂದ್ರಾಚಾರ್, ನಾಗೇಂದ್ರ ಆಚಾರ್ಯ, ಗಿರೀಶ ಆಚಾರ್ಯ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ