ರಾಮನಗರ: ಉತ್ತಮ ಕಲಿಕೆ, ಉಜ್ವಲ ಭವಿಷ್ಯ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಮಾರ್ಚ್ 12ರಂದು ರಾಜ್ಯಾದ್ಯಂತ ಕನ್ನಡ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಕರ್ನಾಟಕದ ಗಡಿ ಭಾಗಗಳಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚುತ್ತಿವೆ. ಮತ್ತೊಂದೆಡೆ ಕರ್ನಾಟಕ ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಬಂದ್ ಗೆ ಕರೆ ಕೊಡುತ್ತಿದ್ದು, ಶಿಕ್ಷಕರು ಹಾಗೂ ಎಲ್ಲ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕು ಎಂದರು.
ಈಗ ರಾಜ್ಯದಲ್ಲಿ ಕನ್ನಡ ನಾಡು, ಕನ್ನಡ ಭಾಷೆ, ಕನ್ನಡಿಗರಿಗೆ ಉದ್ಯೋಗ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದ್ಯಾವುದರ ಬಗ್ಗೆಯೂ ಹೆಚ್ಚಿನ ಗಮನ ಹರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯದಲ್ಲಿ 800ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು 3900 ಕೋಟಿ ಅನುದಾನ ಘೋಷಿಸಿದೆ.ರಾಜ್ಯ ಸರ್ಕಾರ ಕನ್ನಡ ಶಾಲೆಗಳಿಗಾಗಿ ಕನಿಷ್ಠ 1 ಸಾವಿರ ಕೋಟಿ ರುಪಾಯಿ ಅನುದಾನ ಕೊಟ್ಟಿದ್ದಾರೆ ಸಂತೋಷವಾಗುತ್ತಿತ್ತು. ಆದರೆ, ನಯಾ ಪೈಸೆ ಕೊಡದೆ ಕಡೆಗಣಿಸಿದ್ದಾರೆ. 30 ವರ್ಷಗಳಿಂದ ಕನ್ನಡ ಶಾಲೆಗಳನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಕನ್ನಡ ಶಾಲೆಗಳು ಬೇವರ್ಸಿ ಅಂತಾಗಿದೆ.ಅವುಗಳನ್ನು ಉಳಿಸಿ ಬೆಳೆಸಿ ಗೌರವ ಕೊಡಬೇಕಿದೆ ಎಂದು ಹೇಳಿದರು.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಮಾಡಿರುವುದು ಖಂಡನೀಯ. ಯಾವ ರೀತಿ ನಿಷೇಧ ಮಾಡುತ್ತೀರಿ ಎಂಬುದರ ಸ್ಪಷ್ಟನೆ ಇಲ್ಲ. ಶೋಕಿಗಾಗಿ ಹೇಳಿದಂತಿದೆ. ಮಕ್ಕಳು ಮೊಬೈಲ್ ಹಿಡಿದರೆ ಕೇಸು ಹಾಕಿ ಬಂಧಿಸಿ ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಪ್ರಪಂಚದ ಉದ್ದಗಲಕ್ಕೂ ಸಾಮಾಜಿಕ ಜಾಲತಾಣ ನಿರೀಕ್ಷೆಗೂ ಮೀರಿ ಬೆಳೆದಿದೆ. ವಿಶ್ವದ ಅನೇಕ ಸುದ್ಧಿಗಳನ್ನು ಕ್ಷಣಾರ್ಧದಲ್ಲಿ ಮಕ್ಕಳು ಅಂಗೈಯಲ್ಲಿ ತಿಳಿಯುತ್ತಿದ್ದಾರೆ. ಮೊಬೈಲ್ ನಿಷೇಧಿಸಿದರೆ ಮಕ್ಕಳು ಪೋಷಕರಿಗೆ ವಿರೋಧವಾಗುತ್ತಾರೆ. ಮನೆ ಬಿಟ್ಟು ಹೋಗುತ್ತಾರೆ. ಸರ್ಕಾರಕ್ಕೆ ಇವುಗಳ ಬಗ್ಗೆ ಎಚ್ಚರಿಕೆ ಇರಬೇಕು. ಸಾಮಾಜಿಕ ಜಾಲತಾಣ ನಿಷೇಧಕ್ಕೆ ನಮ್ಮ ವಿರೋಧವಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು , ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್.ಗಂಗಾಧರ್ , ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್ , ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯ ಸುಧಾ , ತಾಲೂಕು ಕಾರ್ಯಾಧ್ಯಕ್ಷ ಕುಮಾರ್ , ಕಾರ್ಯದರ್ಶಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕುಮಾರ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಹೇಮಂತ್ , ತಾಲೂಕು ಕಾರ್ಯದರ್ಶಿ ಕೊತ್ತೀಪುರ ಪಿ.ಸುರೇಶ್ , ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.
7ಕೆಆರ್ ಎಂಎನ್ 2.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೊಡದೆ ಕಡೆಗಣಿಸಿರುವುದನ್ನು ಖಂಡಿಸಿ ಹಾಗೂ ಸಾಮಾಜಿಕ ಜಾಲತಾಣ ನಿಷೇಧ ಮಾಡಬಾರದೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.