ಕನ್ನಡಪ್ರಭ ವಾರ್ತೆ ಹಾಸನ
ಇಟಿಎಫ್, ಆರ್‌ಆರ್‌ಟಿ ಹಾಗೂ ಎಡಿಸಿ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ್ದು, ಕಾಡಾನೆಗಳ ಟ್ರ್ಯಾಕಿಂಗ್, ಜಿಪಿಎಸ್ ಫೋಟೋ ಅಪ್ಲೋಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಡಾನೆಗಳ ಚಲನವಲನಗಳ ಬಗ್ಗೆ ಅನೌನ್ಸ್‌ಮೆಂಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಡಾನೆ ಹಾವಳಿ ಹೆಚ್ಚಿರುವ ಮಲೆನಾಡು ಭಾಗದ ಹೋಬಳಿಗಳಲ್ಲಿ ಈ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಕಾಡಾನೆಗಳ ಹಿಂದೆ ಬಿದ್ದು ಅವುಗಳ ಚಲನವಲನ ಪತ್ತೆ ಮಾಡಿ ಅದರ ಮಾಹಿತಿಯನ್ನು ಆ ಭಾಗದ ಜನರಿಗೆ ನೀಡುತ್ತಿದ್ದರು. ಇದರಿಂದ ಸ್ಥಳೀಯರಿಗೆ ಆನೆಗಳ ಇರುವಿಕೆ ಬಗ್ಗೆ ಮಾಹಿತಿ ಸಿಗುತ್ತಿತ್ತು. ಇಂತಹ ಅತ್ಯಮೂಲ್ಯ ಮಾಹಿತಿ ನೀಡುತ್ತಿದ್ದ ಹೊರಗುತ್ತಿಗೆ ನೌಕರರಿಗೆ ನೀಡುತ್ತಿದ್ದುದು ಕೂಡ ಕನಿಷ್ಠ ವೇತನ ಮಾತ್ರ. ಇದೀಗ ಕೆಲ ತಿಂಗಳುಗಳಿಂದ ಅದು ಕೂಡ ಬಾರದ ಪರಿಣಾಮ ಈ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಮಲೆನಾಡಿಗರಿಗೆ ಮತ್ತಷ್ಟು ಸಂಕಷ್ಟ:ಆರ್ಥಿಕ ಬಿಕ್ಕಟ್ಟಿಗೆ ಸಲುಕಿರುವ ರಾಜ್ಯ ಸರ್ಕಾರಕ್ಕೆ ತನ್ನ ನೌಕರರಿಗೆ ವೇತನ ನೀಡಲಿಕ್ಕೂ ಆಗುತ್ತಿಲ್ಲ. ಹಲವು ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಈಡೇರಿಕೆಗಾಗಿ ಸರ್ಕಾರದ ಖಜಾನೆ ಖಾಲಿ ಮಾಡಿ ಇದೀಗ ರಾಜ್ಯದಲ್ಲಿ ಆರ್ಥಿಕ ಸಂದಿಗ್ಧ ತಂದೊಡ್ಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಜಿಲ್ಲೆಯ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇದರ ನಡುವೆ ಪ್ರತಿನಿತ್ಯ ಕಾಡಾನೆ ಪೀಡಿತ ಪ್ರದೇಶದ ಜನರ ನಡುವಿನ ಸೇತುವೆಯಾಗಿದ್ದ ನೌಕರರಿಂದ ಮುಷ್ಕರ ಆರಂಭವಾಗಿರುವುದು ಮಲೆನಾಡು ಭಾಗದ ಜನರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ.
ಹಗಲು ರಾತ್ರಿಯೆನ್ನದೆ ಜೀವಭಯದಲ್ಲಿ ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಾ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಅವರ ಬೇಡಿಕೆಗಳನ್ನು ಅರಣ್ಯ ಇಲಾಖೆ ಸಚಿವರು ತಕ್ಷಣವೇ ಬಗೆಹರಿಸಲು ಮುಂದಾಗಬೇಕು. ಸಾರ್ವಜನಿಕರ ಜೊತೆಗೂಡಿ ಹೊರಾಟ ಮಾಡಲು ಸಿದ್ಧರಿದ್ದೇವೆ ಎಂದು ಅರೇಹಳ್ಳಿ ಪಟ್ಟಣದ ಕಡೇಗರ್ಜೆ ವಿಜಯರಾಜ್ ತಿಳಿಸಿದ್ದಾರೆ.
ಮುಷ್ಕರ ನಿರತ ಅರೆಕಾಲಿಕ ಸಿಬ್ಬಂದಿ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದು ನಮಗೆ ಸಿಗಬೇಕಾದ ಸೌಲಭ್ಯ ಸರಿಯಾಗಿ ಸಿಗದ ಕಾರಣದಿಂದ ಹಾಗೂ ಜಿಪಿಎಸ್ ಫೋಟೋಸ್ ಹಾಗೂ ಸಂದೇಶ ರವಾನೆ ಮಾಡುವುದಿಲ್ಲವೆಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.