ಬಸ್‌ ಸಂಚಾರ ಬಂದ್‌, ಪ್ರಯಾಣಿಕರ ಪರದಾಟ : ಕರ್ನಾಟಕ - ಮಹಾರಾಷ್ಟ್ರ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

KannadaprabhaNewsNetwork |  
Published : Feb 24, 2025, 12:32 AM ISTUpdated : Feb 24, 2025, 01:07 PM IST
ಕಕಕಕ | Kannada Prabha

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಎಂಇಎಸ್‌ ಪುಂಡರು ಹಲ್ಲೆ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮವಾಗಿ ಉಭಯ ರಾಜ್ಯಗಳ ಪ್ರಯಾಣಿಕರ ಮೇಲೆ ಬಿದ್ದಿದ್ದು, ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

 ಬೆಳಗಾವಿ : ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಎಂಇಎಸ್‌ ಪುಂಡರು ಹಲ್ಲೆ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮವಾಗಿ ಉಭಯ ರಾಜ್ಯಗಳ ಪ್ರಯಾಣಿಕರ ಮೇಲೆ ಬಿದ್ದಿದ್ದು, ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾರಿಗೆ ಸಂಸ್ಥೆಯ ಬಸ್‌ಗಳು ಆಯಾ ಗಡಿವರೆಗೆ ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಮಹಾರಾಷ್ಟ್ರದತ್ತ ತೆರಳುವ ಪ್ರಯಾಣಿಕರಿಗೆ ತೀವ್ರ ತೊಂದರೆ ಎದುರಾಗಿದೆ. 

ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ನಡೆಸುತ್ತಿದ್ದರೆ, ಅತ್ತ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ನಡೆಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಕಪ್ಪು ಮಸಿ ಬಳಿಯುತ್ತಿವೆ. ಅಲ್ಲದೇ, ಭಗವಾಧ್ವಜವನ್ನು ಬಸ್‌ಗಳಿಗೆ ಕಟ್ಟುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್‌ಗಳ ಸೇವೆಯನ್ನು ಗಡಿವರೆಗೆ ಮಾತ್ರ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ.ಅದರಂತೆಯೇ ಮಹಾರಾಷ್ಟ್ರ ಸರ್ಕಾರ ಕೂಡ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗಳ ಬಸ್‌ಗಳ ಸೇವೆಯನ್ನು ಕರ್ನಾಟಕಕ್ಕೆ ಸ್ಥಗಿತಗೊಳಿಸಿ, ಆ ರಾಜ್ಯದ ಗಡಿಭಾಗದವರೆಗೆ ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೊಲ್ಲಾಪೂರ ಹಾಗೂ ಇಚಲಕರಂಜಿ‌ ಮಾರ್ಗದ ಬಸ್ ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಕಾಗವಾಡ - ಮಿರಜ್ ಮಾರ್ಗದ ಬಸ್ ಸಂಚಾರ ಯಥಾ ಸ್ಥಿತಿ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಗೆ ಸಂಚರಿಸುವ ಬಸ್ ಸಂಚಾರ ಮಾತ್ರ ಬಂದ್ ಮಾಡಲಾಗಿದೆ‌. ಪ್ರತಿನಿತ್ಯ ಚಿಕ್ಕೋಡಿ ಉಪವಿಭಾಗದಿಂದ ಕೊಲ್ಲಾಪೂರ‌ಗೆ 120ಕ್ಕೂ ಹೆಚ್ಚು ಟ್ರಿಪ್‌ ಬಸ್‌ಗಳು ಸಂಚಾರ ಮಾಡುತ್ತಿದ್ದವು. ಈಗ ಇವುಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿವೆ. ರಾಜ್ಯಕ್ಕೆ ಮಹಾರಾಷ್ಟ್ರ ಬಸ್‌ಗಳ‌ ಸೇವೆಯನ್ನು ಬಂದ್ ಮಾಡಲಾಗಿದೆ.ನಾರಾಯಣಗೌಡ ನೇತೃತ್ವದಲ್ಲಿ ನಾಳೆ ಕರವೇ ಬೃಹತ್‌ ಪ್ರತಿಭಟನೆ

ಬಸ್‌ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ವಿರುದ್ಧ ಮಾರಿಹಾಳ ಠಾಣೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಫೆ.25 ರಂದು ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಬಸ್‌ ನಿರ್ವಾಹಕನ ಮೇಲೆ ದಾಖಲಿಸಿರುವ ಪೋಕ್ಸೋ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಲ್ಲದೇ, ಬಾಳೇಕುಂದ್ರಿ ಗ್ರಾಮಕ್ಕೆ ತೆರಳಿ ಬೃಹತ್‌ ಪ್ರತಿಭಟನೆ ಮಾಡಲಾಗುವುದು. ಅಲ್ಲದೇ, ಶಿವಸೇನೆ ಪ್ರತಿಕೃತಿ ದಹಿಸಲಾಗುವುದು. ಬಸ್‌ ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್‌ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ