ಕನ್ನಡಪ್ರಭ ವಾರ್ತೆ ಕುಶಾಲನಗರ
ಸಹಕಾರ ಸಂಘಗಳ ಪ್ರತಿನಿಧಿಗಳು ನಿರಂತರ ಅಧ್ಯಯನ ಹಾಗೂ ತರಬೇತಿ ಹೊಂದುವ ಮೂಲಕ ಸದಸ್ಯರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಸಂಘಗಳನ್ನು ಸಮಗ್ರ ಅಭಿವೃದ್ಧಿ ಗೊಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲದ ಅಧ್ಯಕ್ಷರಾದ ಬಿ ಕಾವೇರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಮತ್ತು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್ಮೆಂಟ್ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದೊಂದಿಗೆ ಮೈಸೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಕುಶಾಲನಗರದಲ್ಲಿ ನಡೆದ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷರಾದ ಎನ್ ಗಂಗಣ್ಣ ಸಹಕಾರ ಸಂಘಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಗಳು ತಲುಪಬೇಕು ಈ ಮೂಲಕ ಪ್ರತಿಯೊಬ್ಬರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸಹಕಾರ ಸಂಘಗಳ ಆದ್ಯ ಕರ್ತವ್ಯವಾಗಿದೆ. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷರಾದ ಏ ಕೆ ಮನು ಮುತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಪ್ರಗತಿಗೆ ಸಹಕಾರ ಸಂಘದ ಪಾತ್ರ ಪ್ರಮುಖವಾಗಿದೆ. ಸಹಕಾರ ವಲಯ ಆರ್ಥಿಕ ವ್ಯವಸ್ಥೆ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಬೀರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ರವಿ ಬಸಪ್ಪ, ಮಡಿಕೇರಿ ಕೆ ಐ ಸಿ ಎಂ ಪ್ರಾಂಶುಪಾಲರಾದ ರೇಣುಕಾ ಆರ್ ಎಸ್, ಉಪಸ್ಥಿತರಿದ್ದರು.ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಯ ಅಧಿಕಾರ ಮತ್ತು ಕರ್ತವ್ಯಗಳು ಹಾಗೂ ಸಹಕಾರ ಕಾನೂನಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಎಚ್ ಎಸ್ ನಾಗರಾಜಯ್ಯ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ನಾಯಕತ್ವದ ಗುಣಗಳು ಹಾಗೂ ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ, ನಬಾರ್ಡ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವೈ ವಿ ಗುಂಡೂರಾವ್ ಅವರು ಉಪನ್ಯಾಸ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಇತರ ನಿಗಮಗಳಿಂದ ದೊರೆಯುವ ಸೌಲಭ್ಯಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ದೊರಕುವ ಪ್ರಯೋಜನಗಳ ಬಗ್ಗೆ ಕಾರ್ಯದಲ್ಲಿ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪದಾಧಿಕಾರಿಗಳು ಮತ್ತು ಅಧಿಕಾರಿಗಳಿಂದ ವಿಷಯಗಳ ಬಗ್ಗೆ ಚರ್ಚೆ ವಿಮರ್ಶೆ ನಡೆಯಿತು.
ತರಬೇತಿ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಎಂಟು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಮೈಸೂರು ಚಾಮರಾಜನಗರ ಮಂಡ್ಯ ಕಡೆಯಿಂದ ನೂರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.