ಕನ್ನಡಪ್ರಭ ವಾರ್ತೆ ರಾಮದುರ್ಗ
ನಗರದ ಸಮೀಪದ ಅಶೋಕವನದ ರಾಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕರ್ನಾಟಕದ 2ನೇ ಅತಿ ಎತ್ತರದ ಶಿವನಮೂರ್ತಿ ಹಾಗೂ ಬೃಹತ್ ನಂದಿ ವಿಗ್ರಹದ ಸಾನ್ನಿಧ್ಯದಲ್ಲಿ ಫೆ.26 ರಂದು 8ನೇ ಮಹಾಶಿವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಿವಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಅಶೋಕ ಪಟ್ಟಣ ತಿಳಿಸಿದರು.ಭಾನುವಾರ ಶಿವನಮೂರ್ತಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.26 ರಂದು ಮುಂಜಾನೆ 8 ಗಂಟೆಗೆ ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಶಿವನಮೂರ್ತಿಗೆ ಮತ್ತು ಬೃಹತ್ ನಂದಿ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಅಂದು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಪುಟ್ಟರಾಜ ಸಂಗೀತ ಪಾಠಶಾಲೆ ಮಕ್ಕಳಿಂದ ಮತ್ತು ಸಹಜಸ್ಥಿತಿ ಯೋಗ ಸತ್ಸಂಗ ಬಳಗದವರಿಂದ ಶಿವನಾಮಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಶಿವಪ್ರತಿಷ್ಠಾನ ಸೇವಾ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ ಪಟ್ಟಣ ನೇತೃತ್ವದಲ್ಲಿ ಮಹಾಶಿವರಾತ್ರಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ವೇಳೆ ಪದ್ಮಭಾಸ್ಕರ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಭರತನಾಟ್ಯ ಮತ್ತು ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆ ಆರೋಗ್ಯ, ಶಿಕ್ಷಣ, ಕೃಷಿ, ಸಾಹಿತ್ಯ ಮತ್ತು ಸಾಮಾಜಿಕ ರಂಗದಲ್ಲಿ ವಿಶಿಷ್ಟ ಸೇವೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.ರಾತ್ರಿ 8.30 ರಿಂದ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಕಿರ್ತನ ಕೇಸರಿ ಕರಿಕಟ್ಟಿಯ ಗುರುನಾಥಶಾಸ್ತ್ರಿಗಳಿಂದ ಶಿವನಾಮ ಸ್ಮರಣೆ ಪ್ರವಚನ ನಡೆಯಲಿದೆ. 9.30 ರಿಂದ ಮಣಕವಾಡದ ಅನ್ನದಾನೇಶ್ವರಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ ಎಂದು ಪಟ್ಟಣ ಹೇಳಿದರು.
ಮಹಾಶಿವರಾತ್ರಿಯ ಉಪವಾಸ ಮಾಡುವ ಭಕ್ತರಿಗೆ ಸಚಿವ ಜಮೀರಅಹ್ಮದ ಅವರು ಪ್ರತಿವರ್ಷದಂತೆ ಈ ವರ್ಷವು ಮೂರು ಟನ್ ಖರ್ಜೂರ ಮತ್ತು ನಾನಾ ಭಕ್ತರು ಕೊಡಮಾಡಿರುವ ಬಾಳೆಹಣ್ಣು, ಶೇಂಗಾ ಮತ್ತು ಸಾಬೂದಾನಿ ಭಕ್ತರಿಗೆ ವಿತರಿಸಲಾಗುವುದು ಎಂದ ಅವರು, ಶಿವರಾತ್ರಿಯ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರುಮಹಾಶಿವರಾತ್ರಿಗೆ ಶಿವನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸೂಚಿಸುವ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಪ್ರತಿಷ್ಠಾನ ಸೇವಾ ಸಮಿತಿಯ ಸದಸ್ಯರಾದ ಜಯಪ್ರಕಾಶ ಶಿಂದೆ, ಸುರೇಶ ಪತ್ತೇಪೂರ, ವಿಜಯಶೆಟ್ಟಿ, ಫಕೀರಪ್ಪ ಕೊಂಗವಾಡ, ಬಿ.ಎಂ.ಜಂತ್ಲಿ, ಡಿಎಸ್‌ಪಿ ಚಿದಂಬರ ಮಡಿವಾಳರ ಸೇರಿದಂತೆ ಹಲವರಿದ್ದರು.