ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ (ಇಎಸ್‌ಝಡ್) ನಡೆಯುತ್ತಿರುವ ೫೨ ಅಕ್ರಮ ಫಾರ್ಮ್ ಪ್ಲಾಟ್ ಮಾರಾಟ ಸಂಬಂಧ ಕನ್ನಡಪ್ರಭದ ವರದಿಗೆ ಮತ್ತೊಂದು ಫಲಶ್ರುತಿ ಸಿಕ್ಕಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ (ಇಎಸ್‌ಝಡ್) ನಡೆಯುತ್ತಿರುವ ೫೨ ಅಕ್ರಮ ಫಾರ್ಮ್ ಪ್ಲಾಟ್ ಮಾರಾಟ ಸಂಬಂಧ ಕನ್ನಡಪ್ರಭದ ವರದಿಗೆ ಮತ್ತೊಂದು ಫಲಶ್ರುತಿ ಸಿಕ್ಕಿದೆ.
ಅಕ್ರಮ ಫಾರ್ಮ್ ಪ್ಲಾಟ್ ಮಾರಾಟ ಸಂಬಂಧ ತಹಸೀಲ್ದಾರ್ ಎಂ.ಎಸ್.ತನ್ಮಯ್ ಪ್ರಾದೇಶಿಕ ಆಯುಕ್ತರ ಮೌಖಿಕ ಸೂಚನೆ ಮೇರೆಗೆ ಭೂ ಪರಿವರ್ತನೆ 11 ಇ ನಕಾಶೆ ನೀಡುವುದಕ್ಕೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಇದೀಗ ತಹಸೀಲ್ದಾರ್ ಎಂ.ಎಸ್.ತನ್ಮಯ್ ಗುಂಡ್ಲುಪೇಟೆ ಉಪ ನೋಂದಣಾಧಿಕಾರಿಗೆ ಮತ್ತೊಂದು ಪತ್ರವನ್ನು ಕಳೆದ ಅ.೮ರಂದು ಬರೆದಿದ್ದಾರೆ.
ಪತ್ರದಲ್ಲೇನಿದೆ?:
ಬಂಡೀಪುರ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳನ್ನು ಚಿಕ್ಕ ಚಿಕ್ಕ ಪ್ಲಾಟ್ ಗಳಾಗಿ ತುಂಡರಿಸಿ ನೋಂದಣಿ ಮಾಡುವ ಪ್ರಕ್ರಿಯೆಯನ್ನು ತಡೆದು,ಅಕ್ರಮ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ನಿಯಂತ್ರಿಸಲು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ನಿಯಮಾನುಸಾರ ಅಗತ್ಯ ಕ್ರಮ ವಹಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು.
ಇನ್ಮುಂದೆ ಬಂಡೀಪುರ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಕೃಷಿ ಜಮೀನುಗಳನ್ನು ಚಿಕ್ಕ ಚಿಕ್ಕ ಪ್ಲಾಟ್ ಗಳಾಗಿ ವಿಂಗಡಿಸಿಕೊಂಡು ನೋಂದಣಿಗೆ ಬಂದಂತಹ ಸಂದರ್ಭದಲ್ಲಿ, ಕಡ್ಡಾಯವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಅಧ್ಯಕ್ಷರು ಹಾಗೂ ಪ್ರಾದೇಶಿಕ ಆಯುಕ್ತರ ಅಭಿಪ್ರಾಯ ಪಡೆದು ಅನಂತರವೇ ನೋಂದಣಿ ಕ್ರಮವಹಿಸುವಂತೆ ಸಬ್ ರಿಜಿಸ್ಟ್ರಾರ್‌ಗೆ ತಹಸೀಲ್ದಾರ್ ಸೂಚಿಸಿದ್ದಾರೆ.
ಕನ್ನಡಪ್ರಭಕ್ಕೆ ಸಂದ ಜಯ:
ಕಳೆದ ಸೆ.25ರ ಕನ್ನಡಪ್ರಭದಲ್ಲಿ ‘ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ 52 ಅಕ್ರಮ ಫಾರ್ಮ್ ಪ್ಲಾಟ್ ಮಾರಾಟಕ್ಕೆ ಯತ್ನ’ ಎಂಬ ವರದಿ ಪ್ರಕಟವಾಗಿತ್ತು.
ಕನ್ನಡಪ್ರಭ ವರದಿ ಬಂದ ದಿನವೇ ಪಿಸಿಸಿಎಫ್ ಕುಮಾರ್ ಪುಷ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ತಹಸೀಲ್ದಾರ್ ಎಂ.ಎಸ್.ತನ್ಮಯ್ 11 ಇ ನಕಾಶೆಗೆ ಬ್ರೇಕ್ ಹಾಕಿದ್ದರು. ಈಗ ನೋಂದಣಿಗೂ ಬ್ರೇಕ್ ಹಾಕುವ ಮೂಲಕ ಅಕ್ರಮ ಫಾರ್ಮ್ ಹೌಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಆಡಳಿತ ಮುಂದಾಗಿದೆ.
ಕನ್ನಡಪ್ರಭ ನಿರಂತರ ವರದಿ ಫಲವಾಗಿ ಕಣಿಯನಪುರದ 4.14 ಎಕರೆ ಜಮೀನಿನಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ವಹಿವಾಟಿನ ಅಕ್ರಮ ಲೇಔಟ್ ಮಾರಾಟಕ್ಕೆ ಈಗ ಅಧಿಕೃತವಾಗಿ ಬೀಗ ಬಿದ್ದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.