ರಂಗೂಪುರ ಶಿವಕುಮಾರ್
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ, ವನ್ಯಜೀವಿ ಸಂಘರ್ಷದ ಹಿನ್ನೆಲೆ ಬಂಡೀಪುರ ಸಫಾರಿ ಸ್ಥಗಿತಗೊಂಡು ೭೫ ದಿನಗಳಾದವು. ೨೦೨೫ ಕಳೆದು ಹೋಗಿ ೨೦ ದಿನಗಳು ಕಳೆದರೂ ಸಫಾರಿ ಇನ್ನೂ ಆರಂಭವಾಗಿಲ್ಲ.
೨೦೨೬ ಹೊಸ ವರ್ಷದ ಶುರುವಿನಲ್ಲಿ ಸಫಾರಿ ಆರಂಭವಾಗುತ್ತದೆ ಎಂದು ನಂಬಿದ್ದ ರೆಸಾರ್ಟ್, ಹೋಟೆಲ್ ಮಾಲೀಕರು ಹಾಗೂ ಬಂಡೀಪುರ ಅರಣ್ಯ ಇಲಾಖೆಗೆ ನಿರಾಸೆ ತರಿಸಿರುವುದಂತೂ ಸುಳ್ಳಲ್ಲ . ಹೊಸ ವರ್ಷದಲ್ಲಾದರೂ ೨೦೨೫ರ ಸಂಕಷ್ಟದ ದಿನಗಳನ್ನು ಮರೆಯಲು ಸಫಾರಿ ಆರಂಭವಾಗಬೇಕಿತ್ತು ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬಂದಿದೆ.ಪ್ರತಿ ವರ್ಷಾಂತ್ಯ ಹಾಗೂ ಆರಂಭದ ವಾರಗಳಲ್ಲಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ, ಸಂಜೆ ಸಮಯದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಸದಾ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಬಂಡೀಪುರ ಸಫಾರಿ ಕೇಂದ್ರ ಬಿಕೋ ಎನ್ನುತ್ತಿರುವ ಜೊತೆಗೆ ಅರಣ್ಯ ಇಲಾಖೆ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಪ್ರವಾಸೋದ್ಯಮ ನಂಬಿದ ರೆಸಾರ್ಟ್ ಹಾಗೂ ಹೋಟೆಲ್‌ಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.
ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಟೀ ಸ್ಟಾಲ್, ನಂದಿನಿ ಕ್ಷೀರ ಕೇಂದ್ರ, ಫುಡ್ ಚಾಟ್ಸ್, ಹಾಂಡಿ ಕ್ರಾಫ್ಟ್ ಹಾಗೂ ಇನ್ನಿತರೆ ವ್ಯಾಪಾರಿಗಳಿಗೆ ಪ್ರವಾಸಿಗರಿಲ್ಲದೇ ವಹಿವಾಟು ಇಲ್ಲದಂತಾಗಿದೆ. ಸಫಾರಿ ಕೇಂದ್ರದ ಮುಂದೆ ಹಾದು ಹೋಗುವ ಮೈಸೂರು- ಊಟಿ ಹೆದ್ದಾರಿ ಬದಿಯ ಅಂಗಡಿಗಳಿಗೆ ವ್ಯಾಪಾರ ಇಲ್ಲ. ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬರದ ಕಾರಣ ಎಲ್ಲೆಡೆ ಬಿಕೋ ಎನ್ನುತ್ತಿದೆ.ಸಫಾರಿಗೆ ಪರ, ವಿರೋಧ:
ಇದರಿಂದ ಪ್ರವಾಸೋದ್ಯಮ ನಂಬಿದ ಹೋಟೆಲ್, ರೆಸಾರ್ಟ್, ಅಕ್ರಮ ಹಾಗೂ ಸಕ್ರಮ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸಫಾರಿ ಬಂಡೀಪುರದಲ್ಲಿಲ್ಲ ಎಂಬ ಕಾರಣದಿಂದ ಪ್ರವಾಸಿಗರು ಬರುತ್ತಿಲ್ಲ ಎಂಬ ಕೊರಗು ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರಿಗಿದೆ.
------
ಎಸ್.ಪ್ರಭಾಕರನ್, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ