ಕನ್ನಡಪ್ರಭ ವಾರ್ತೆ ಮಂಗಳೂರು ಸಾರ್ವಜನಿಕರು ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಹೊಸ ವರ್ಷಾಚರಣೆಯನ್ನು ಆಚರಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಚರ್ಚ್, ಹೊಟೇಲ್, ರೆಸ್ಟೋರೆಂಟ್, ಖಾಸಗಿ ಸಭಾಂಗಣ ಸೇರಿದಂತೆ ಒಳಾಂಗಣಗಳಲ್ಲಿ ಕಾರ್ಯಕ್ರಮ ನಡೆಸಲು ಕೋರಿ 36 ಅರ್ಜಿ ಬಂದಿವೆ. ಹಲವು ನಿಬಂಧನೆಗಳೊಂದಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದ್ದು, ಒಳಗಾಂಗಣದಲ್ಲಿ ಕಾರ್ಯಕ್ರಮ ನಡೆಸುವವರು ಮಧ್ಯರಾತ್ರಿ 12.30ರ ವರೆಗೆ ಅವಕಾಶ ನೀಡಲಾಗುತ್ತಿದೆ ಎಂದರು.ಬೀಚ್ ಅಥವಾ ಇತರೆಡೆ ಹೊರಾಂಗಣಗಳಲ್ಲಿ ಕಾರ್ಯಕ್ರಮ ನಡೆಸುವವರು ರಾತ್ರಿ 10 ಗಂಟೆಗೆ ಮುಕ್ತಾಯಗೊಳಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ನಿಗಾ ವಹಿಸಲಿದ್ದು, 17 ಹೊಯ್ಸಳ ವಾಹನ ಸೇರಿದಂತೆ 66 ಸೆಕ್ಟರ್ ಮೊಬೈಲ್ ಘಟಕಗಳು ಕಾರ್ಯಾಚರಣೆಯಲ್ಲಿ ಇರಲಿವೆ. 106 ಪಾಯಿಂಟ್‌ಗಳಲ್ಲಿ ಎಸಿಪಿ ದರ್ಜೆಯಿಂದ ಹಿಡಿದು ಅಧಿಕಾರಿ, ಸಿಬ್ಬಂದಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಸಿವಿಲ್ ಹಾಗೂ ಟ್ರಾಫಿಕ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಸೇರಿದಂತೆ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ವಹಿಸಲಿದ್ದಾರೆ. ಡ್ರಗ್ಸ್ ವಿರುದ್ಧವೂ ನಾಲ್ಕು ತಂಡಗಳು ಕಾರ್ಯಾಚರಿಸಲಿದ್ದು, ಸೇವನೆ ಮತ್ತು ಸಾಗಾಟ- ಮಾರಾಟದ ಮೇಲೆ ನಿಗಾ ವಹಿಸಲಿದ್ದಾರೆ. ಬೀಚ್‌ಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಮುಂಜಾಗ್ರತಾ ಕ್ರಮಗಳ ಜತೆಗೆ ಲೈಟಿಂಗ್ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ. 112 ಸೇರಿದಂತೆ ಸ್ಥಳೀಯ ಅಧಿಕಾರಿಗಳು ನೇರವಾಗಿ ಸಂಪರ್ಕಕ್ಕೆ ಸಹಕಾರಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ಅವರು ವಿವರ ನೀಡಿದರು.ಡಿಸಿಪಿಗಳಾದ ದಿನೇಶ್ ಕುಮಾರ್, ಸಿದ್ಧಾರ್ಥ್ ಗೋಯಲ್ ಇದ್ದರು.ಪ್ರಮುಖ ಅಂಶಗಳು-ಒಳಾಂಗಣ ಸಮಾರಂಭಗಳಿಗೆ ಮಧ್ಯರಾತ್ರಿ 12.30ರ ವರೆಗೆ ಅವಕಾಶ-ಹೊರಾಂಗಣದಲ್ಲಿ ರಾತ್ರಿ 10ರವರೆಗೆ.-850 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ.-8 ನಗರ ಸಶಸ್ತ್ರ ಮೀಸಲು ಪಡೆ ತಂಡ, 3 ಕೆಎಸ್‌ಆರ್‌ಪಿ.-ಬೀಚ್, ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ-----------