ಬಂಡೂರು ತಳಿಯ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರು.ಗೆ ಮಾರಾಟವಾಗುವ ಮೂಲಕ ದಾಖಲೆ

KannadaprabhaNewsNetwork | Updated : Feb 04 2025, 04:12 AM IST

ಸಾರಾಂಶ

ಬಹು ಬೇಡಿಕೆ ಇರುವ ಬಂಡೂರು ತಳಿಯ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರು.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

  ಮಳವಳ್ಳಿ : ಬಹು ಬೇಡಿಕೆ ಇರುವ ಬಂಡೂರು ತಳಿಯ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರು.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ತಾಲೂಕಿನ ಕಿರುಗಾವಲು ಗ್ರಾಮದ ಮನೋಹರ್ (ಮನು) ಎಂಬುವವರ ಪುತ್ರ ಯುವ ರೈತ ಉಲ್ಲಾಸ್ ಗೌಡ ಕೆಲ ತಿಂಗಳ ಹಿಂದೆ ತಮ್ಮ ಮನೆಯಲ್ಲಿಯೇ ಹುಟ್ಟಿದ್ದ ಈ ಟಗರನ್ನು ಟಿ.ನರಸೀಪುರಕ್ಕೆ 20 ಸಾವಿರ ರು. ಮಾರಾಟ ಮಾಡಿದ್ದರು. ನಂತರ ಕೆಲ ದಿನಗಳಲ್ಲಿಯೇ ತಾವೇ 50 ಸಾವಿರ ಕೊಟ್ಟು ಮತ್ತೆ ಖರೀದಿ ಮಾಡಿ ಮನೆಯಲ್ಲಿ ಸಾಕಿದ್ದರು. ಈಗ ಈ ಟಗರನ್ನು ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಎಂಬುವವರಿಗೆ 1.48 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.

ಬಿಸಿಎ ವ್ಯಾಸಂಗ ಮಾಡುತ್ತಿರುವ ಉಲ್ಲಾಸ್ ಗೌಡ ಅವರು ತಮ್ಮ ತಾತ ಹಾಗೂ ತಂದೆ ಮನೋಹರ್(ಮನು) ಅವರಿಂದ ಕಲಿತ ಕುರಿ ಸಾಕಾಣಿಕೆ ಶಿಕ್ಷಣದ ಜತೆಗೆ ವ್ಯಾಪಾರವಾಗಿ ರೂಢಿಸಿಕೊಂಡಿದ್ದಾರೆ. ಮಾರಾಟವಾದ ಟಗರನ್ನು ವಿಶೇಷ ಕಾಳಜಿಯಿಂದ ನಾಲ್ಕು ತಿಂಗಳ ಕಾಲ ಸಾಕಿದ್ದರು.

ಬಂಡೂರು ಕುರಿ ತನ್ನದೇ ವಿಶೇಷತೆ ಹೊಂದಿದೆ. ಈ ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿ ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿದೆ. ಬಂಡೂರು ಕುರಿ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ನೀಡಲಿದೆ.

ಇದರ ಮಾಂಸ ಮಾರಾಟ ತೀರ ಅಪರೂವಾಗಿದೆ. ಈ ತಳಿ ಕುರಿಗಳು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಮನೋಹರ್(ಮನು) ಹಳ್ಳಿಗಳನ್ನು ಸುತ್ತಿ ಬಂಡೂರು ತಳಿಯನ್ನು ಹುಡುಕಿಗೆ ಸಾಕಾಣಿಕೆ ಮಾಡುತ್ತಿದ್ದಾರೆ.

ಅತಿ ಹೆಚ್ಚು ಬೆಲೆಗೆ ಮಾರಾಟವಾದ ಟಗರಿಗೆ ವಿಶೇಷ ಪೂಜೆ ಮಾಡಿ ಮೆರವಣಿಗೆ ಮೂಲಕ ಉಲ್ಲಾಸ್ ಗೌಡ ಕುಟುಂಬಸ್ಥರು ಜವಾದ್ ಅವರಿಗೆ ಹಸ್ತಾಂತರಿಸಿದರು. ಸುತ್ತಮುತ್ತಲ ಹತ್ತಾರು ಗ್ರಾಮಗಳ ಹಲವು ಮಂದಿ ವಿಶೇಷ ಟಗರನ್ನು ನೋಡಲು ಮುಗಿಬಿದ್ದರು.

ಟಗರ್ ಖರೀದಿ ಮಾಡಿದ ಜವಾದ್ ಮಾತನಾಡಿ, ಇಲ್ಲಿಯಿಂದಲೇ ಸುಮಾರು 30 ಕುರಿಗಳನ್ನು ಖರೀದಿ ಮಾಡಿದ್ದೇನೆ. ಈ ಟಗರಿನ ಮೂಲಕ ಬಂಡೂರು ತಳಿ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ ಎಂದರು.

ಉಲ್ಲಾಸ್ ಗೌಡ ಮಾತನಾಡಿ, ನಮ್ಮ ತಾತ ಕುರಿ ಸಾಕುತ್ತಿದ್ದರು. ಅವರಂತೆ ತಂದೆ ಸಹ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ನನಗೂ ಸಹ ಆಸಕ್ತಿ ಮೂಡಿ ತಂದೆ ಜೊತೆ ಕುರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ನಗರ ಪ್ರದೇಶಗಳಿಗೆ ಹೋಗಿ ಸಂಬಳಕ್ಕೆ ದುಡಿಯುವ ಬದಲು ಹಳ್ಳಿಯಲ್ಲಿಯೇ ನೆಮ್ಮದಿ ಬದುಕು ಸಾಗಿಸುವ ಕನಸು ಕಂಡಿರುವೆ ಎಂದರು.

ಕುರಿ ಸಾಕಾಣಿಕೆ ತಮ್ಮ ಜೀವನಾಧಾರವಾಗಿದೆ. ಕುರಿ ಸಾಕುವುದನ್ನು ಕೀಳಾಗಿ ಕಾಣುವ ಸಮಾಜದಲ್ಲಿ ಮಗ ಸಣ್ಣ ವಯಸ್ಸಿನಲ್ಲಿಯೇ ಓದಿನ ಜತೆಗೆ ಆದಾಯಕ್ಕೆ ವೃತ್ತಿ ಆರಂಭಿಸುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದು ಉಲ್ಲಾಸ್ ತಂದೆ ಮನೋಹರ್(ಮನು) ಹೇಳಿದರು.

Share this article