ರಾಮನಗರ: ಹೈವೋಲ್ಟೇಜ್ ಕಣವಾಗಿ ರೂಪುಗೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಲೀಡ್ ಕೊಡಿಸುವುದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಮೂರು ಪಕ್ಷಗಳ ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆ, ರಾಮನಗರ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಹರಡಿಕೊಂಡಿದೆ. ಈ ಮೂರು ಜಿಲ್ಲೆಗಳಿಂದ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಸೇರಿವೆ.
ಬೆಂಗಳೂರು ನಗರ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ, ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ರಾಮನಗರ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ , ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ, ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್, ಜೆಡಿಎಸ್ ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ರಂಗನಾಥ್ ಅವರನ್ನು ಹೊಂದಿದೆ.
ಇದರಲ್ಲಿ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರೆ, ಎಚ್ .ಸಿ.ಬಾಲಕೃಷ್ಣರವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿದ್ದು, ಅವರು ಸಂಪುಟ ದರ್ಜೆ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು - ಮೈಸೂರು ಇನ್ಪ್ರಾಸ್ಟ್ರಾಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ ಅಧ್ಯಕ್ಷರಾಗಿ ರಘುನಂದನ್ ರಾಮಣ್ಣ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಗಾಣಕಲ್ ನಟರಾಜು, ಕನಕಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಆರ್ .ಕೃಷ್ಣಮೂರ್ತಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಆರ್.ಪ್ರಮೋದ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಂಚೇಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎ.ಬಿ.ಚೇತನ್ ಕುಮಾರ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಕೆ.ರಾಜು ನೇಮಕಗೊಂಡಿದ್ದಾರೆ. ಇವರೆಲ್ಲರು ಕಾಂಗ್ರೆಸ್‌ನ ಪ್ರಮುಖ ನಾಯಕರೇ ಆಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣ ಶಾಸಕರು ಹಾಗೂ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಮತಗಳ ಲೀಡ್ ಕೊಡಿಸುವ ಅಗ್ನಿ ಪರೀಕ್ಷೆ ಎದುರಾಗಿದೆ.
ಈ ಪ್ರತಿನಿಧಿಗಳಿಗೆಲ್ಲ ಹೆಚ್ಚಿನ ಮತಗಳನ್ನು ಕೊಡಿಸುವ ಟಾಸ್ಕ್ ಅನ್ನು ಪಕ್ಷ ನೀಡಿದ್ದು, ಹಾಗೊಂದು ವೇಳೆ ನಿರೀಕ್ಷೆಯಂತೆ ಮತಗಳನ್ನು ತಂದುಕೊಡುವಲ್ಲಿ ವಿಫಲರಾದಲ್ಲಿ ಈಗಿರುವ ಹುದ್ದೆಗಳನ್ನು ಕಳೆದುಕೊಳ್ಳು ವುದರಲ್ಲಿ ಅನುಮಾನ ಇಲ್ಲ.
ಬಿಜೆಪಿ-ಜೆಡಿಎಸ್ ನಾಯಕರ ಒಗ್ಗಟ್ಟು: ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿರುವುದರಿಂದ ಉಭಯ ಪಕ್ಷಗಳ ನಾಯಕರು ಒಗ್ಗೂಡಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ, ಜೆಡಿಎಸ್ ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳು ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ಕೊಡಿಸುವ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಮತ್ತು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜೆಡಿಎಸ್ ನಾಯಕರು ಸಾಥ್ ನೀಡುತ್ತಿದ್ದಾರೆ. ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿಯ ಗೌತಮ್ ಗೌಡ, ಮಾಗಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ , ಬಿಜೆಪಿಯ ಪ್ರಸಾದ್ ಗೌಡ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಶಾಸಕರಾಗಿದ್ದರು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ನಾಯಕರು ಸಹಕಾರ ನೀಡುತ್ತಿದ್ದಾರೆ. ಕನಕಪುರ ಕ್ಷೇತ್ರದಲ್ಲಿಯೂ ಉಭಯ ನಾಯಕರು ಒಂದಾಗಿದ್ದರೆ, ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಕೃಷ್ಣ ಕುಮಾರ್ ಅವರಿಗೆ ಜೆಡಿಎಸ್ ನ ಡಾ.ರವಿ ನಾಗರಾಜಯ್ಯ ಜೊತೆಗೂಡಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.