ಮಂಜುನಾಥ ಕೆ.ಕನ್ನಡಪ್ರಭ ವಾರ್ತೆ ಬೆಂಗಳೂರುಐಟಿ-ಬಿಟಿ ನಗರವಾದ ಬೆಂಗಳೂರು ಡ್ರಗ್ ಪೆಡ್ಲರ್‌ಗಳಿಗೆ ದೊಡ್ಡ ಮಾರುಕಟ್ಟೆಯಾಗಿದ್ದು, ರಾಜಧಾನಿಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಡ್ರಗ್ ಪೆಡ್ಲರ್‌ಗಳು ಪೊಲೀಸರ ಕಣ್ಣು ತಪ್ಪಿಸಿ ಹಲವು ಮಾರ್ಗಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ.
ಪೇಜ್ ತ್ರೀ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ:ಸಿಲಿಕಾನ್ ಸಿಟಿಯಲ್ಲಿ ನಡೆಯುವ ಪೇಜ್ ತ್ರೀ ಪಾರ್ಟಿಗಳಿಗೆ ಡ್ರಗ್ ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ಸರಬರಾಜು ಮಾಡಿ ಲಕ್ಷಾಂತರ ರು. ಹಣ ಮಾಡುತ್ತಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ಮತ್ತು ಏರ್‌ಪೋರ್ಟ್ ರಸ್ತೆಯಲ್ಲಿನ ಪಬ್, ಹೋಟೆಲ್‌ಗಳಲ್ಲಿ ಪೇಜ್ ತ್ರೀ ಪಾರ್ಟಿಗಳು ನಡೆಯುತ್ತವೆ. ಯುವ ಸಮೂಹವೇ ಟಾರ್ಗೆಟ್:19 ರಿಂದ 35 ವರ್ಷದ ಯುವಕರು, ಯುವತಿಯರೇ ಡ್ರಗ್ ಮಾಫಿಯಾದವರ ಪ್ರಮುಖ ಟಾರ್ಗೆಟ್ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ನಗರ ಮತ್ತು ನಗರದ ಹೊರವಲಯಕ್ಕೆ ಸೇರಿದ ಪ್ರಮುಖ ಪ್ರದೇಶಗಳಲ್ಲಿ ಪೆಡ್ಲರ್‌ಗಳು ಹೆಚ್ಚು ಸಕ್ರಿಯರಾಗಿದ್ದಾರೆ. ಶಾಲಾ-ಕಾಲೇಜುಗಳ ಬಳಿ ಪೆಡ್ಲರ್‌ಗಳ ತಮ್ಮದೇ ಆದ ಜಾಲಗಳ ಮುಖಾಂತರ ಡ್ರಗ್ಸ್ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ತಮಗೆ ಅರಿವಿಗೆ ಬಾರದೆ ಡ್ರಗ್ಸ್ ಜಾಲದಲ್ಲಿ ಸಿಲುಕುವ ಯುವ ಸಮೂಹ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದೆ.₹162.87 ಕೋಟಿ ಮೌಲ್ಯದ ಡಗ್ಸ್ ಜಪ್ತಿ:
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಈ ವರ್ಷ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ಕೋಟ್ಯಂತರ ರು. ಮೌಲ್ಯದ ಮಾದಕ ವಸ್ತುಗಳೇ ಜೀವಂತ ಸಾಕ್ಷಿ. ಸಿಸಿಬಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ತಂಡಗಳು ನಡೆಸಿದ ಸತತ ಕಾರ್ಯಾಚರಣೆಯ ಪರಿಣಾಮವಾಗಿ 2025ರಲ್ಲಿ ₹162.87 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ನಗರದಲ್ಲಿ ಕಳೆದ 11 ತಿಂಗಳಲ್ಲಿ 1078 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 52 ವಿದೇಶಿಯರು ಸೇರಿದಂತೆ 1543 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಂದಾಜು 1446.76 ಕೆ.ಜಿ. ಮಾದಕವಸ್ತು ಜಪ್ತಿಯಾಗಿದೆ. ಚಾಕೋಲೆಟ್, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್ ಸಾಗಾಟ:ಡಾರ್ಕ್‌ನೆಟ್ ಮೂಲಕ ಕೊರಿಯರ್, ವಿದೇಶಿ ಅಂಚೆ, ರೈಲು ಮತ್ತು ಬಸ್‌ಗಳ ಮೂಲಕ ಮಾದಕವಸ್ತುವನ್ನು ತರಿಸಿಕೊಳ್ಳಲು ಪೆಡ್ಲರ್‌ಗಳು ಅದನ್ನು ಸಣ್ಣ ಪೊಟ್ಟಣಗಳನ್ನಾಗಿ ಮಾಡುತ್ತಾರೆ. ಬಳಿಕ ಐಟಿ-ಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸೇರಿ ಇತರೆ ಗ್ರಾಹಕರಿಗೆ ಸರಬರಾಜು ಮಾಡಿ ಹಣ ಮಾಡುತ್ತಿದ್ದಾರೆ. ಚಾಕೋಲೆಟ್, ಬಿಸ್ಕೆಟ್, ಕಾಫಿ ಪುಡಿ, ಪಾರ್ಸೆಲ್, ಗಿಫ್ಟ್ ಬಾಕ್ಸ್ ಜತೆಗೆ ಇಟ್ಟುಕೊಂಡು ಸಾಗಿಸುವುದೂ ಸೇರಿದಂತೆ ಅನೇಕ ಮಾದರಿಯಲ್ಲಿ ಪೆಡ್ಲರ್‌ಗಳು ಡ್ರಗ್‌ಗಳನ್ನು ಸಾಗಿಸುತ್ತಾರೆ.ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಡ್ರಗ್ಸ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ದೇಶ-ವಿದೇಶಗಳ ಪೆಡ್ಲರ್‌ಗಳು, ವಿಶೇಷವಾಗಿ ನೈಜೀರಿಯನ್ನರು, ದಕ್ಷಿಣ ಆಫ್ರಿಕಾದವರು, ಕೇರಳ ಮೂಲದವರು ಪೆಡ್ಲಿಂಗ್‌ನಲ್ಲಿ ಸಕ್ರಿಯರಾಗಿದ್ದಾರೆ. ಒಡಿಶಾ, ಆಂಧ್ರಪ್ರದೇಶ ಸೇರಿ ಇನ್ನಿತರೆ ರಾಜ್ಯಗಳಿಂದ ಗಾಂಜಾ ಹೆಚ್ಚಿನ ಪ್ರಮಾಣದಲ್ಲಿ ನಗರಕ್ಕೆ ಹರಿದು ಬರುತ್ತಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
-ಕೋಟ್-ಡ್ರಗ್ ಮಾಫಿಯಾ ವಿರುದ್ಧ ಸಮರಬೆಂಗಳೂರಿನಲ್ಲಿ ಕಳೆದ 11 ತಿಂಗಳಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ಭಾಗಿಯಾಗಿದ್ದ 52 ವಿದೇಶಿಯರು ಸೇರಿದಂತೆ 1543 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಂದಾಜು 162 ಕೋಟಿ ರು. ಮೌಲ್ಯದ 1446.76 ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಡ್ರಗ್ ಮಾಫಿಯಾದ ಅಟ್ಟಹಾಸ ಕಡಿಮೆ ಮಾಡಲು ಇನ್ನಷ್ಟು ಚುರುಕಿನ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಮಾಫಿಯಾವನ್ನು ಮಟ್ಟಹಾಕಲಾಗುವುದು.-ರಾಜಾ ಇಮಾಮ್ ಕಾಸಿಮ್, ಸಿಸಿಬಿ ಡಿಸಿಪಿ (ವಿಭಾಗ-2) ಲಾಡ್ಜ್‌ನಲ್ಲೂ ಡ್ರಗ್ಸ್ ದಂಧೆ:
ಕಳೆದ ಸೆಪ್ಟೆಂಬರ್‌ನಲ್ಲಿ ರಾಮಮೂರ್ತಿ ನಗರದಲ್ಲಿ ಸುಪ್ರೀಮ್ ಸೂಟ್ಸ್ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದರು.ಮೊದಲಿಗೆ ಪರಿಚಯಸ್ಥ ಪೆಡ್ಲರ್‌ಗಳಿಗೆ ಡ್ರಗ್ಸ್ ಸೇವನೆ ಮಾಡುವ ಸಲುವಾಗಿಯೇ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಬಳಿಕ ಲಾಡ್ಜ್‌ಗೆ ಬರುವ ಗ್ರಾಹಕರಿಗೆ ಸ್ವತಃ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಆರೋಪಿಗಳು ನೈಜೀರಿಯಾ ಮೂಲದ ಇಸ್ಮಾಯಿಲ್ ಎಂಬುವವನಿಂದ ಡ್ರಗ್ಸ್ ಖರೀದಿಸಿ ಮಾರುತ್ತಿದ್ದರು ಎಂಬ ವಿಚಾರ ತನಿಖೆಯಿಂದ ಗೊತ್ತಾಗಿತ್ತು.