ಏ.15ರಂದು ಬೆಂಗಳೂರು ಕರಗ ಮಹೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Apr 14, 2024, 01:46 AM ISTUpdated : Apr 14, 2024, 08:13 AM IST
(ಕರಗ ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು, ಶ್ರೀ ಧರ್ಮರಾಯಸ್ವಾಮಿ ದೇವಾಲಯ ಹಾಗೂ ಕರಗ ಸಾಗುವ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ತಯಾರಿ ಭರದ ಸಿದ್ಧತೆ ನಡೆಯುತ್ತಿದೆ.

 ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು, ಶ್ರೀ ಧರ್ಮರಾಯಸ್ವಾಮಿ ದೇವಾಲಯ ಹಾಗೂ ಕರಗ ಸಾಗುವ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ತಯಾರಿ ಭರದ ಸಿದ್ಧತೆ ನಡೆಯುತ್ತಿದೆ.

ಏ.15ರಂದು ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಈ ಬಾರಿಯೂ ಅರ್ಚಕ ಎ. ಜ್ಞಾನೇಂದ್ರ ಕರಗ ಹೊರಲಿದ್ದು, ಈಗಾಗಲೇ ದೇವಾಲಯ ಸೇರಿದ್ದು, ಜ್ಞಾನ, ಯೋಗ ಸೇರಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದ್ರೌಪದಿಸಹಿತ ಧರ್ಮರಾಯಸ್ವಾಮಿಯ ಪರಿವಾರವನ್ನು ಹೊತ್ತು ಸಾಗುವ ಬೃಹತ್ ಮರದ ತೇರು ನವೀಕರಣಗೊಂಡು ರಥೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಉತ್ಸವದ ಯಶಸ್ಸಿಗೆ ವಹ್ನಿಕುಲ ಕ್ಷತ್ರಿಯ ಸಮಾಜ ಬಾಂಧವರು, ಗೌಡರು, ಗಣಾಚಾರಿಗಳು, ಗಂಟೆ ಪೂಜಾರಿಗಳು, ಚಾಕರೀದಾರರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಕರಗಕ್ಕೆ ಸೇಲಂ ಮೊಗ್ಗನ್ನೇ ಬಳಸಲಾಗುವುದು. ಹೀಗಾಗಿ ಭಾನುವಾರದ ನಂತರ ಕರಗ ಮುಗಿಯುವವರೆಗೆ ಪ್ರತಿದಿನ ಸೇಲಂನಿಂದ ಮಲ್ಲಿಗೆ ಮೊಗ್ಗು ಬೆಂಗಳೂರಿಗೆ ಬರಲಿದೆ. ಕರ್ನಾಟಕದ ಮಲ್ಲಿಗೆ ಮೊಗ್ಗು ಬರಲಿದೆ. ಈ ವರ್ಷ ಕರಗ ಉತ್ಸವದಲ್ಲಿ 3 ಸಾವಿರಕ್ಕೂ ಅಧಿಕ ವೀರಕುಮಾರರು ಭಾಗವಹಿಸಲಿದ್ದು, ಎಲ್ಲರಿಗೂ ಧರ್ಮರಾಯಸ್ವಾಮಿ ದೇವಸ್ಥಾನದ ಕಡೆಯಿಂದ ಉಚಿತ ಕೆಂಪು ವಸ್ತ್ರ, ಪೇಟ ನೀಡಲಾಗುವುದು. ಜತೆಗೆ ದೀಕ್ಷೆ ತೆಗೆದುಕೊಳ್ಳುವವರಿಗೆ ದೀಕ್ಷಾ ಖಡ್ಗಗಳನ್ನೂ ಉಚಿತವಾಗಿ ನೀಡಲಾಗುವುದು ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ಮಾಹಿತಿ ನೀಡಿದ್ದಾರೆ.ಬಾಕ್ಸ್...

ಧ್ವಜಾರೋಹಣಕ್ಕೆ ಬಿದಿರಿನ ಮರ

ಉತ್ಸವದಲ್ಲಿ ಸಂಪ್ರದಾಯದಂತೆ ಜರಗನಹಳ್ಳಿಯ ಕುಲಬಾಂಧವರು ಪ್ರತಿ ವರ್ಷದಂತೆ ಬಿದಿರಿನ ಮರವನ್ನು ತರಲಿದ್ದು, ಅದನ್ನು ದೇವಾಲಯದ ಆವರಣದಲ್ಲಿ ನೆಟ್ಟು, ಸೋಮವಾರ ರಾತ್ರಿ ರಥೋತ್ಸವ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು.

ಹೀಗೆ ಚೈತ್ರಮಾಸ ಶುಕ್ಲ ಪಕ್ಷದ ಸಪ್ತಮಿ ದಿನ ಆರಂಭವಾಗಿ ಬಿದಿಗೆವರೆಗೆ ಉತ್ಸವ ಜರುಗಲಿದೆ. ಏ.23ರ ಚೈತ್ರ ಪೌರ್ಣಿಮೆ ದಿನವಾದ ಮಂಗಳವಾರ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ಹಾಗೂ ಕರಗ ಶಕ್ತ್ಯೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಅನುದಾನ ಬಿಡುಗಡೆ ಇಲ್ಲ:

ಕರಗ ಉತ್ಸವಕ್ಕೆ ಬಿಬಿಎಂಪಿ ವತಿಯಿಂದ ₹1.5 ಕೋಟಿ ಮೀಸಲಿಡಲಾಗಿದೆ. ಆದರೆ ಉತ್ಸವ ಸಮೀಪಿಸುತ್ತಿದ್ದರೂ, ಪಾಲಿಕೆಯಿಂದ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ, ಸಮಿತಿ ವತಿಯಿಂದಲೇ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ರಸ್ತೆ ಹಾಗೂ ಕಲ್ಯಾಣಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸತೀಶ್ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!