ಬೆಂಗ್ಳೂರು-ಮುಂಬೈ ವಂದೇ ಭಾರತ್‌ ಸ್ಲೀಪರ್‌ಗೆ ಚಾಲನೆ

KannadaprabhaNewsNetwork |  
Published : Nov 02, 2026, 03:00 AM IST
Vande Bharath Train 1 | Kannada Prabha

ಸಾರಾಂಶ

ಬೆಂಗಳೂರು-ಮಂಗಳೂರು ನಗರಗಳ ನಡುವೆ ಅತಿಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಕೇಂದ್ರ ರೈಲು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಬೆಂಗಳೂರು-ಮಂಗಳೂರು ನಗರಗಳ ನಡುವೆ ಅತಿಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಕೇಂದ್ರ ರೈಲು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

ನಗರದ ಬೈಯಪ್ಪನಹಳ್ಳಿಯ ಎಸ್.ಎಂ.ವಿಟಿ ನಿಲ್ದಾಣದಲ್ಲಿ ಬೆಂಗಳೂರು-ಮುಂಬೈ ನಡುವೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ಲೀಪರ್ ರೈಲು ಸಂಚಾರ ಉದ್ಘಾಟನೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪರೀಕ್ಷೆ ನಡೆಯುತ್ತಿದೆ. ಈ ಹಂತ ಮುಗಿದ ಕೂಡಲೇ ಎರಡು ನಗರಗಳ ನಡುವೆ ವಂದೇ ಭಾರತ್ ಸಂಚರಿಸಲಿದೆ ಎಂದರು.

ಇದಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಶಯದಂತೆ ಬೆಂಗಳೂರು ಹುಬ್ಬಳ್ಳಿ-ಮುಂಬೈ ನಡುವೆ ಮತ್ತೊಂದು ವಂದೇ ಭಾರತ್ ಸಂಚರಿಸಲಿದೆ. ಇದರಿಂದಾಗಿ ವಿಕಸಿತ ಭಾರತದ ಆಶಯದಂತೆ ರಾಷ್ಟ್ರದ ಎಲ್ಲಾ ಮಹಾನಗರಗಳ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಂಪರ್ಕ ಏರ್ಪಡುವುದರಿಂದ ರಾಷ್ಟ್ರದ ಆರ್ಥಿಕತೆಗೆ, ವಾಣಿಜ್ಯ ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದರು.

ಜೋಷಿ ಮಾತನಾಡಿ, 2007ರಿಂದ 2014ರವರೆಗೆ ಯುಪಿಎ ನೇತೃತ್ವದ ಸರ್ಕಾರ ರಾಜ್ಯಕ್ಕೆ ಕೇವಲ 200 ಕೋಟಿ ವಾರ್ಷಿಕ ಅನುದಾನ ನೀಡುತ್ತಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ವಾರ್ಷಿಕ ಸರಾಸರಿ 7 ಸಾವಿರದಿಂದ 8 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಸಿ.ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್ ಮಂಜುನಾಥ್‌, ರಾಜ್ಯಸಭಾ ಸದಸ್ಯ ಜಗ್ಗೇಶ್ ಮತ್ತಿತರರು ಪಾಲ್ಗೊಂಡಿದ್ದರು.

-ಬಾಕ್ಸ್-

ರಾಜ್ಯೋತ್ಸವದ ಕೊಡುಗೆ

ಎಲ್ಲಾ ಹೇಗಿದ್ದೀರಾ, ಚೆನ್ನಾಗಿದ್ದೀರಾ ಎಂದೇ ಕನ್ನಡದಲ್ಲಿ ಮಾತನಾಡಿದ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್, ತಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದರಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ರಾಜ್ಯೋತ್ಸವದ ಕೊಡುಗೆ. ಕನ್ನಡ ಜನರಿಗಾಗಿ ಫೈನಾನ್ಶಿಯಲ್ ಸಿಟಿ ಹಾಗೂ ಐಟಿ ಸಿಟಿಗಳ ನಡುವೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ನಗರದ ಬೈಯಪ್ಪನ ಹಳ್ಳಿಯ ಎಸ್‌ಎಂವಿಟಿ ರೈಲುನಿಲ್ದಾಣದಲ್ಲಿ ಬೆಂಗಳೂರು-ಮುಂಬೈ ನಗರಗಳ ನಡುವೆ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.ಸೌತ್ ಕಾರಿಡಾರ್‌ನಲ್ಲಿ ಬೆಂಗಳೂರು, ಪುಣೆ ಬುಲೆಟ್‌ ರೈಲು ಸೇರ್ಪಡೆ: ಪ್ರಧಾನಿ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಅನುಮೋದನೆ ನೀಡಿದ್ದು, ಬೆಂಗಳೂರು-ಪುಣೆ ಬುಲೆಟ್ ಟ್ರೈನ್ ಈ ಕಾರಿಡಾರ್‌ನಲ್ಲಿ ಸೇರಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿಗಳು ದಕ್ಷಿಣ ಕಾರಿಡಾರ್ ಹಾಗೂ ಉತ್ತರ ಕಾರಿಡಾರ್ ಎಂದು ಎರಡು ವಿಭಾಗಗಳನ್ನಾಗಿ ಬುಲೆಟ್ ಟ್ರೈನ್ ಅನ್ನು ವಿಂಗಡಿಸಿದ್ದು, ದಕ್ಷಿಣ ಕಾರಿಡಾರ್ ನಲ್ಲಿ ಬೆಂಗಳೂರು-ಹೈದರಾಬಾದ್-ಚೆನ್ನೈ ಹಾಗೂ ಬೆಂಗಳೂರು-ಪುಣೆ ನಡುವೆ ಬುಲೆಟ್‌ ಟ್ರೈನ್‌ ಸಂಚರಿಸಲಿವೆ. ಅಲ್ಲಿಗೆ ಒಟ್ಟು ದಕ್ಷಿಣದ ಎಲ್ಲಾ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣವಾದಂತಾಗುತ್ತದೆ ಎಂದರು.ಮುಂದಿನ ವರ್ಷಗಳಲ್ಲಿ 3,000 ಕಿ.ಮೀ. ಬುಲೆಟ್ ಟ್ರೈನ್ ಕಾರಿಡಾರ್ ಘೋಷಣೆ ಆಗಲಿದ್ದು, ಬೆಂಗಳೂರು-ಪುಣೆ ಕಾರಿಡಾರ್ ನಿಂದಾಗಿ ಕರ್ನಾಟಕ ರಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಂಪರ್ಕಿಸಿದಂತಾಗುತ್ತದೆ. ಈ ಟ್ರೈನ್ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಪುಣೆಯವರೆಗೆ ಸಂಚರಿಸಲಿದೆ ಎಂದರು.ಬೆಂಗಳೂರು, ಹೈದರಾಬಾದ್, ಅಮರಾವತಿ (ಆಂಧ್ರ ರಾಜಧಾನಿ) ಮತ್ತು ಚೆನ್ನೈ-ಈ ನಾಲ್ಕು ದೊಡ್ಡ ಐಟಿ ನಗರಗಳನ್ನು ಒಂದು ಮಾಡುವ ಕಾರಿಡಾರ್‌ಗೆ ಈಗಾಗಲೇ ಅನುಮೋದನೆ ದೊರೆತಿದೆ. ಈ ಮಾರ್ಗ ನಿರ್ಮಾಣವಾದ ನಂತರ ಬೆಂಗಳೂರು- ಚೆನ್ನೈ ಕೇವಲ 73 ನಿಮಿಷ (1 ಗಂಟೆ 13 ನಿಮಿಷ), ಬೆಂಗಳೂರು-ಹೈದ್ರಾಬಾದ್ ಪ್ರಯಾಣ ಕೇವಲ 2.10 ಗಂಟೆಗೆ ಇಳಿಯಲಿದೆ. ಆಗ ಈ ಎರಡೂ ನಗರಗಳು ಒಂದೇ ನಗರವಾಗುತ್ತವೆ ಎಂದು ಸಚಿವರು ಹೇಳಿದರು.ಈ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ಶಕ್ತಿಯುತವಾದ ಆರ್ಥಿಕ ವ್ಯವಸ್ಥೆಯೊಂದಿಗೆ ಯುವಕರಿಗೆ ಉದ್ಯೋಗಾವಕಾಶಗಳೂ ದೊರೆಯಲಿವೆ. ಆ ಮೂಲಕ ಪ್ರಧಾನಿ ಅವರ ವಿಕಸಿತ ಭಾರತದ ಕನಸು ನನಸಾದಂತಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕ್ರಮ: ಸಹಕಾರ ಸಚಿವ ಲಕ್ಷ್ಮಣ ಸವದಿ
ನದಿ ಜೋಡಣೆ ವಿರೋಧಿಸಿ ಬೃಹತ್‌ ಹೋರಾಟಕ್ಕೆ ಅಣಿ