ರಸ್ತೆ ಗುಂಡಿ ತ್ವರಿತವಾಗಿ ಮುಚ್ಚಿ: ತುಷಾರ್‌

KannadaprabhaNewsNetwork | Updated : May 17 2024, 07:32 AM IST

ಸಾರಾಂಶ

ಮಳೆಯಿಂದ ನಗರದ ರಸ್ತೆಗಳಲ್ಲಿ ಗುಂಡಿ ಸೃಷ್ಟಿಯಾಗಿದ್ದು ಅನಧಿಕೃತವಾಗಿ ರಸ್ತೆ ಕತ್ತರಿಸಲು ಬ್ರೇಕ್‌ ಬಿದ್ದಂತಾಗಿದೆ.

 ಬೆಂಗಳೂರು :  ನಗರದ ಪ್ರಮುಖ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

ಗುರುವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದ ನಗರದಲ್ಲಿ ರಸ್ತೆ ಗುಂಡಿ ಸೃಷ್ಟಿಯಾಗುತ್ತಿದ್ದು, ಗುಂಡಿಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಮುಚ್ಚಬೇಕು. ವಲಯ ಆಯುಕ್ತರು ರಸ್ತೆ ಗುಂಡಿ ಪರಿಶೀಲನೆ ನಡೆಸಿ ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು. ರಸ್ತೆ ನಿರ್ವಹಣೆ ಅವಧಿ ಮುಕ್ತಾಯಗೊಳ್ಳದ ರಸ್ತೆಗಳಲ್ಲಿ ಗುಂಡಿ ಸೃಷ್ಟಿಯಾದರೆ ಸಂಬಂಧ ಪಟ್ಟ ಗುತ್ತಿಗೆದಾರರರಿಗೆ ತಿಳಿಸಿ ಮುಚ್ಚಿಸಬೇಕು ಎಂದು ಸೂಚಿಸಿದ್ದಾರೆ.

ರಸ್ತೆ ಕತ್ತರಿಸಿದರೆ ಸಾಕಷ್ಟು ಸಮಸ್ಯೆಯಾಗಲಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಸಂಸ್ಥೆಗಳು ರಸ್ತೆ ಕತ್ತರಿಸದಂತೆ ಸೂಚಿಸಿ. ಅನಧಿಕೃತವಾಗಿ ರಸ್ತೆ ಕತ್ತರಿಸದಂತೆ ನಿಗಾವಹಿಸಬೇಕು. ರಸ್ತೆ ಬದಿಯಲ್ಲಿ ಸುರಿಯುವ ಕಸದ ಬ್ಲಾಕ್ ಸ್ಪಾಟ್‌ ಗಳನ್ನು ತೆರವುಗೊಳಿಸುವಂತೆ ಘನತ್ಯಾಜ್ಯ ವಿಭಾಗ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಆಗದಂತೆ ಕ್ರಮ

ನಗರದಲ್ಲಿ 198 ಪ್ರವಾಹ ಪೀಡಿದ ಪ್ರದೇಶಗಳ ಪೈಕಿ ಈಗಾಗಲೇ 148 ಕಡೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಉಳಿದ 50 ಸ್ಥಳಗಳಲ್ಲಿ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಸಭೆಗೆ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್ ಸೇರಿದಂತೆ ಮೊದಲಾದವರಿದ್ದರು.

‘ರಾಜಕಾಲುವೆ ಒತ್ತುವರಿತೆರವು ಶುರು ಮಾಡಿ‘ರಾಜಕಾಲುವೆ ಒತ್ತುವರಿ ಕುರಿತು ‘ಕನ್ನಡಪ್ರಭ’ದಲ್ಲಿ ಮೇ 16 ರಂದು ಪ್ರಕಟಗೊಂಡ ವಿಶೇಷ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸುವಂತೆ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ತಾಕೀತು ಮಾಡಿದ್ದಾರೆ.

ಇನ್ನು ನಗರದಲ್ಲಿ ಬರುವ ಪ್ರಥಮ, ದ್ವಿತೀಯ ರಾಜಕಾಲುವೆಗಳಲ್ಲಿ ಸಕ್ರಿಯವಾಗಿ ಹೂಳೆತ್ತುವ ಮೂಲಕ ಸ್ವಚ್ಛತೆ ಕಾಪಾಡಿ ಎಲ್ಲಿಯೂ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ತೆಗೆದ ಹೂಳನ್ನು ಅಲ್ಲಿಯೇ ಬಿಡದೆ ಕೂಡಲೇ ತೆರವುಗೊಳಿಸಬೇಕು ಎಂದು ತುಷಾರ್‌ ಗಿರಿನಾಥ್ ಸೂಚಿಸಿದರು.

Share this article