ನಂದಿಬೆಟ್ಟ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಹಾಗೂ ಬಾಗೇಪಲ್ಲಿ ಪಟ್ಟಣದ ಹೆಸರನ್ನು ‘ಭಾಗ್ಯ ನಗರ’ ಎಂದು ಮರು ನಾಮಕರಣ ಮಾಡಲು ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದೇ ವೇಳೆ ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೇ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಅವರ ಹೆಸರಿಡಲು ತೀರ್ಮಾನಿಸಲಾಗಿದ್ದು, ‘ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಒಂದೇ ಸಚಿವ ಸಂಪುಟ ಸಭೆಯಲ್ಲಿ ಮೂರು ಮರು ನಾಮಕರಣಗಳ ಪ್ರಸ್ತಾವನೆಗೆ ಅಂಗೀಕಾರ ದೊರಕಿದೆ.
3,500 ಕೋಟಿ ರು. ಲಾಭ?:
ಮೊದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಿಸುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಕೇಂದ್ರ ಸರ್ಕಾರ ಅನುದಾನ ನೀಡುವಾಗ ನಗರ ಜಿಲ್ಲೆಗಳಿಗೆ ಒಂದು ಅನುದಾನ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಜಿಲ್ಲೆಗಳಿಗೆ ಒಂದು ಅನುದಾನ ನೀಡುತ್ತದೆ. ಬೆಂಗಳೂರು ಗ್ರಾಮಾಂತರ ಬದಲಿಗೆ ಬೆಂಗಳೂರು ಉತ್ತರ ಎಂದು ಬದಲಿಸಿದರೆ 3,500 ಕೋಟಿ ರು. ಹೆಚ್ಚುವರಿ ಅನುದಾನ ಬರುತ್ತದೆ ಎಂದು ಪ್ರಸ್ತಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಬಾಗೇಪಲ್ಲಿ ಇನ್ನು ಭಾಗ್ಯನಗರ-ಸಿಎಂ:
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕು ಆದ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಬದಲಾಯಿಸಲು ಸ್ಥಳೀಯ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದರು. ಆಂಧ್ರ ಗಡಿಯಲ್ಲಿ ಈ ಪಟ್ಟಣವಿದ್ದು, ಹಳ್ಳಿಯನ್ನು ತೆಲುಗಿನಲ್ಲಿ ಪಲ್ಲಿ ಎಂದು ಕರೆಯುತ್ತಾರೆ. ಹೀಗಾಗಿ ಬಾಗೇಪಲ್ಲಿ ಬದಲಿಗೆ ಭಾಗ್ಯನಗರ ಎಂದು ಬದಲಾವಣೆ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಬಾಗೇಪಲ್ಲಿಯ ಸಾಕಷ್ಟು ಹಳ್ಳಿಗಳ ಹೆಸರಿನಲ್ಲೂ ಪಲ್ಲಿ ಎಂದಿದೆ. ಅವುಗಳ ಕತೆಯೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಶಾಸಕರು ಬಾಗೇಪಲ್ಲಿ ಹೆಸರು ಬದಲಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಬದಲಿಸಲು ನಿರ್ಣಯ ಮಾಡಿದ್ದೇವೆ. ಉಳಿದ ಹಳ್ಳಿಗಳ ಬಗ್ಗೆ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ವಿವಿ ಹೆಸರು ಬದಲು:
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ‘ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾಲಯ’ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದ್ದೇವೆ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರು, ಪ್ರಧಾನಿಯಾಗಿ ದೇಶಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಹೆಸರು ನಾಮಕರಣ ಮಾಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.