ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ

KannadaprabhaNewsNetwork |  
Published : Nov 26, 2025, 04:15 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಮನೆ ಮನೆ ಕೊಳವೆ, ಟ್ಯಾಂಕರ್‌ ಮೂಲಕ ಕೋಟ್ಯಂತರ ಜನರಿಗೆ ಕಾವೇರಿ ಕುಡಿಯುವ ನೀರು ಪೂರೈಸುತ್ತಿರುವ ಬೆಂಗಳೂರು ಜಲಮಂಡಳಿಯು, ಇದೀಗ ಬಿಸ್ಲೇರಿ ಮಾದರಿಯಲ್ಲಿ ಕಾವೇರಿ ನೀರಿನ ಬಾಟಲ್‌ ಪರಿಚಯಿಸುವುದಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ.

ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಮನೆ ಮನೆ ಕೊಳವೆ, ಟ್ಯಾಂಕರ್‌ ಮೂಲಕ ಕೋಟ್ಯಂತರ ಜನರಿಗೆ ಕಾವೇರಿ ಕುಡಿಯುವ ನೀರು ಪೂರೈಸುತ್ತಿರುವ ಬೆಂಗಳೂರು ಜಲಮಂಡಳಿಯು, ಇದೀಗ ಬಿಸ್ಲೇರಿ ಮಾದರಿಯಲ್ಲಿ ಕಾವೇರಿ ನೀರಿನ ಬಾಟಲ್‌ ಪರಿಚಯಿಸುವುದಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ.ಅಂದುಕೊಂಡತೆ ಎಲ್ಲವೂ ಸುಗಮವಾದರೆ, ಬಸ್‌ ಸ್ಟ್ಯಾಂಡ್‌, ರೈಲ್ವೆ ಸ್ಟೇಷನ್‌ನಿಂದ ಏರ್‌ಪೋರ್ಟ್‌ವರೆಗೆ ಎಲ್ಲೆಡೆ ಬೆಂಗಳೂರು ಜಲಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಕಾವೇರಿ ನೀರಿನ ಬಾಟಲ್‌ಗಳು ಶೀಘ್ರದಲ್ಲಿ ಲಭ್ಯವಾಗಲಿವೆ.ದಶಕಗಳಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನ ಮನೆ ಮನೆಗೆ ಕಾವೇರಿ ನೀರು ಪೂರೈಕೆಯೊಂದಿಗೆ 1.40 ಕೋಟಿಗೂ ಅಧಿಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಬೆಂಗಳೂರು ಜಲಮಂಡಳಿಯು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಸಾಹಸಕ್ಕೆ ಕೈ ಹಾಕುವುದಕ್ಕೆ ಮುಂದಾಗಿದೆ. ಒಂದು ಲೀಟರ್‌ ಮಾದರಿಯ ಬಾಟಲ್‌ನಿಂದ ವಿವಿಧ ಪ್ರಮಾಣದ ಬಾಟಲ್‌ಗಳೊಂದಿಗೆ ಮಾರುಕಟ್ಟೆಗೆ ಬರುವುದಕ್ಕೆ ಸಜ್ಜಾಗಿದೆ.ಈಗಾಗಲೇ ಖಾಸಗಿ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಜಲಮಂಡಳಿಯ ಅಧಿಕಾರಿಗಳ ಹಂತದಲ್ಲಿ ಸಾಕಷ್ಟು ಸಾಧಕ- ಬಾಧಕ ಚರ್ಚೆ ನಡೆಸಲಾಗಿದ್ದು, ನೀಲ ನಕ್ಷೆ ಸಹ ತಯಾರಿಸಿಕೊಳ್ಳಲಾಗಿದೆ. ಈ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆಯುವುದಷ್ಟೇ ಬಾಕಿ ಇದ್ದು, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವುದಕ್ಕೆ ನಿರ್ಧರಿಸಲಾಗಿದೆ.ಈಗಾಗಲೇ ಮಾರುಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಕಂಪನಿಯಿಂದ ಸ್ಥಳೀಯ ಮಟ್ಟದ ಸಾಕಷ್ಟು ಬ್ರ್ಯಾಂಡ್‌ಗಳಿವೆ. ಈ ಬ್ರ್ಯಾಂಡ್‌ಗಳ ನಡುವೆ ಬೆಂಗಳೂರು ಜಲಮಂಡಳಿಯು ಪೈಪೋರ್ಟಿ ನಡೆಸಬೇಕಿದೆ. ಅದೆಲ್ಲದಕ್ಕೂ ಕಾರ್ಯತಂತ್ರ ರೂಪಿಸಿಕೊಳ್ಳಲಾಗಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.ಮಂಡಳಿಗೆ ‘ಬಿಐಎಸ್‌’ ಬಲ:ನೀರಿನ ಬಾಟಲ್‌ ಉದ್ದಿಮೆ ಪ್ರವೇಶಿಸುವುದಕ್ಕೆ ಬೆಂಗಳೂರು ಜಲಮಂಡಳಿಗೆ ಲಭ್ಯವಾಗಿರುವ ಬಿಐಎಸ್‌ ಸರ್ಟಿಫಿಕೇಷನ್‌ ಬಲವೇ ಮೂಲ ಕಾರಣವಾಗಿದೆ. ದೇಶದ ಯಾವುದೇ ಸರ್ಕಾರಿ ನೀರು ಪೂರೈಕೆ ಸಂಸ್ಥೆಗಳಿಗೆ ಬಿಐಎಸ್‌ ಸರ್ಟಿಫಿಕೇಷನ್‌ ಲಭ್ಯವಾಗಿಲ್ಲ. ಬಿಐಎಸ್‌ ಸರ್ಟಿಫಿಕೇಷನ್‌ ಹೊಂದಿರುವ ಸಂಸ್ಥೆಗಳು ಮಾತ್ರವೇ ಬಾಟಲ್‌ ನೀರು ಪೂರೈಕೆಗೆ ಅವಕಾಶವಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಇದೀಗ ಜಲಮಂಡಳಿ ಮುಂದಾಗಿದೆ.

ಪಿಪಿಪಿ ಮಾದರಿಯಲ್ಲಿ ಯೋಜನೆ:

ಬಾಟಲ್‌ ನೀರಿನ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದೊಂದಿಗೆ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ನೀರು ಹಾಗೂ ಘಟಕ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ಜಲಮಂಡಳಿ ಒದಗಿಸುವುದು. ಘಟಕ ವೆಚ್ಚದೊಂದಿಗೆ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌, ಮಾರಾಟ ಜವಾಬ್ದಾರಿಯನ್ನು ಗುತ್ತಿಗೆದಾರರು ನಿರ್ವಹಿಸುವ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಆರಂಭಿಕ ವರ್ಷದಲ್ಲಿ ಕಡಿಮೆ ಲಾಭಾಂಶವನ್ನು ಮಂಡಳಿ ಇಟ್ಟುಕೊಂಡು ನಂತರದ ವರ್ಷದಲ್ಲಿ ಶೇ.50:50ರ ಅನುಪಾತದಲ್ಲಿ ಲಾಭ ಪಡೆಯುವುದಾಗಿದೆ.ಬಯೋ ಡಿಗ್ರೇಡ್‌ ಬಾಟಲ್:

ದೇಶದಲ್ಲಿ ಸದ್ಯ ಪ್ಲಾಸ್ಟಿಕ್‌ ಬಾಟಲ್‌ ಹಾಗೂ ಗಾಜಿನ ಬಾಟಲ್‌ಗಳಲ್ಲಿ ನೀರಿನ ಮಾರಾಟ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ ಬಾಟಲ್‌ಗಳು ಕ್ಯಾನ್ಸರ್‌ ಕಾರಕ ಹಾಗೂ ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಬೆಂಗಳೂರು ಜಲಮಂಡಳಿಯು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬಯೋ ಡಿಗ್ರೇಡ್‌ ಬಾಟಲ್ ಪರಿಚಯಿಸುವುದಕ್ಕೆ ತೀರ್ಮಾನಿಸಲಾಗಿದೆ. ಮಾರುಕಟ್ಟೆಯಲ್ಲಿ ಇರುವ ಬಾಟಲ್‌ಗಿಂತ 1 ರು. ನಿಂದ 1.50 ರು. ವರೆಗೆ ಹೆಚ್ಚಾಗಲಿದೆ. ಆದರೂ, ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರ ಸ್ನೇಹಿ ಬಾಟಲ್‌ ಪರಿಚಯಿಸುವುದಕ್ಕೆ ಮುಂದಾಗಿದೆ.

ಬ್ರ್ಯಾಂಡ್‌ ಹೆಸರು ಅಂತಿಮವಿಲ್ಲ:

ಬಹುರಾಷ್ಟ್ರೀಯ ಕಂಪನಿಯ ವಿವಿಧ ಹೆಸರಿನ ನೀರಿನ ಬಾಟಲಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇವೆ. ಸ್ಥಳೀಯ ಮಟ್ಟದ ಕಂಪನಿಗಳು ಈಗಾಗಲೇ ಕಾವೇರಿ ಬ್ರ್ಯಾಂಡ್‌ ನಲ್ಲಿ ನೀರಿನ ಬಾಟಲ್‌ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯು ಯಾವ ಹೆಸರಿನಲ್ಲಿ ಬ್ರ್ಯಾಂಡ್‌ ಸೃಷ್ಟಿಸಬೇಕೆಂದು ಇನ್ನೂ ಚಿಂತನೆ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಮಾರಾಟ ವಿಸ್ತರಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಹೆಸರು ನಿರ್ಧಾರ ಮಾಡಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

PREV

Recommended Stories

ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ
ಬೆಳೆಗಳ ಬದಲು ಶಾಸಕರ ಖರೀದಿ ಕೇಂದ್ರ ತೆರೆದ ಸರ್ಕಾರ