ಬೆಳೆಗಳ ಬದಲು ಶಾಸಕರ ಖರೀದಿ ಕೇಂದ್ರ ತೆರೆದ ಸರ್ಕಾರ

KannadaprabhaNewsNetwork |  
Published : Nov 26, 2025, 03:15 AM IST
ವಿಜಯಪುರ | Kannada Prabha

ಸಾರಾಂಶ

ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯುವ ಬದಲಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಎರಡು ಬಣಗಳು ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರು ಬೆಳೆದ ತೊಗರಿ, ಮೆಕ್ಕೆಜೋಳ, ಸೋಯಾಬಿನ್ ಸೇರಿದಂತೆ ಒಟ್ಟು 12 ವಿವಿಧ ಬೆಳೆಗಳಿಗೆ ಖರೀದಿ ಕೇಂದ್ರ ತೆರೆದು ಬೆಂಬಲ‌ ಬೆಲೆ ನೀಡಿ ಖರೀದಿ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದಿಲ್ಲ. ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯುವ ಬದಲಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಎರಡು ಬಣಗಳು ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವರಿಬ್ಬರಲ್ಲಿ ಯಾರ ಪರವಾಗಿ ಹೆಚ್ಚು ಶಾಸಕರು ಇದ್ದಾರೋ ಅವರು ಸಿಎಂ ಆಗುತ್ತಾರೆ. ಡಿಕೆಶಿ ಜೈಲಿಗೆ ಹೋಗಿ ಶಾಸಕರನ್ನು ಭೇಟಿ ಮಾಡಿದರೆ, ಇನ್ನೊಂದೆಡೆ ದಲಿತ ಸಚಿವರು ನೇತೃತ್ವದಲ್ಲಿ ಸಭೆ ಸೇರಿದರು. ವಾಲ್ಮಿಕಿ, ಭೋವಿ, ಅಂಬೇಡ್ಕರ್‌ ಸೇರಿದಂತೆ ಹಲವು ನಿಗಮಗಳಿವೆ. ಅವುಗಳಿಗೆ ₹800 ಕೋಟಿ ಕೊಡ್ತೇವೆ ಎಂದು ಹೇಳಿ ಒಂದು ರುಪಾಯಿ ಕೊಟ್ಟಿಲ್ಲ. ಇಂತಹ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತರೊಂದಿಗೆ ಸೇರಿ ಮೂರು ಹಂತದ ಹೋರಾಟ ನಡೆಸಲಿದೆ ಎಂದರು.

ಮೊದಲ‌ ಹಂತದಲ್ಲಿ ನ.28, 29ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೋರಾಟ, ಎರಡನೇ ಹಂತದಲ್ಲಿ ಡಿ.1 ಅಥವಾ 2ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಹಾಗೂ ಕೊನೆಯ ಮೂರನೇ ಹಂತದಲ್ಲಿ ಹೋರಾಟ ಚಳಿಗಾಲದ ಅಧಿವೇಶನದಲ್ಲಿ ಡಿ.8 ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ನೇತ್ರತ್ವದಲ್ಲಿ ಲಕ್ಷಾಂತರ ಜನರೊಂದಿಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

2023ರಲ್ಲಿ ರಾಜ್ಯದಲ್ಲಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷದ ಅವಧಿಯಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಪ್ರತಿನಿತ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ನಡೆದಿದೆ. ಅಧಿಕಾರಿಗಳಿಗೆ ಹೆಳೋರು ಕೆಳೋರು ಇಲ್ಲವಾಗಿದ್ದು, ಈ ಸರ್ಕಾರದಲ್ಲಿ ಲಂಗು ಲಗಾಮು ಇಲ್ಲದಂತಾಗಿದೆ. ಕರ್ನಾಟಕದ ರಾಜಕಾರಣ ದೆಹಲಿ ಕಡೆಯೆ ಮುಖಮಾಡಿದೆ. ಒಬ್ಬರನ್ನು ಸಿಎಂ ಮಾಡಿ ಎಂದು ಒಂದು ತಂಡ ಹೋಗುತ್ತದೆ, ಇದ್ದವರನ್ನೇ ಮುಂದುವರಿಸಿ ಎಂದು ಮತ್ತೊಂದು ತಂಡ ಹೋಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ, ಜನಸಾಮಾನ್ಯರ ಪಾಲಿಗೆ ಈ ಸರ್ಕಾರ ಸತ್ತುಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

ಕಬ್ಬಿನ ಬೆಲೆ, ಮೆಕ್ಕೆಜೋಳದ ಬೆಲೆಗೆ ಸಂಬಂಧಿಸಿದಂತೆ ರೈತರು ಹೋರಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಾದ ಮೂರು ಲಕ್ಷ ಹೆಕ್ಟೆರ್ ಬೆಳೆಹಾನಿಗೆ ಪರಿಹಾರ ಕೊಟ್ಟಿಲ್ಲ. ರೈತರನ್ನು ಎದುರು ಹಾಕಿಕೊಂಡ ಯಾವ ಸರ್ಕಾರಗಳು ಉಳಿದಿಲ್ಲ, ಅದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಎಸ್ಸಿ ಮೋರ್ಚಾ ರಾಜ್ಯ ಪ್ರಾದಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮುಖಂಡರಾದ ಕಾಸುಗೌಡ ಬಿರಾದಾರ, ಶಶಿಕುಮಾರ ಗುತ್ತಣ್ಣವರ, ಡೊಳ್ಳಿ, ವಿಜಯಕುಮಾರ ಕೂಡಿಗನೂರ, ವಿಜಯ ಜೋಶಿ ಉಪಸ್ಥಿತರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ