ಕನ್ನಡಪ್ರಭ ವಾರ್ತೆ ವಿಜಯಪುರ
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ಖರ್ಗೆ ಅವರು ಸಿಎಂ ಆಗಲಿ. ಅವರ ವಿಚಾರದಲ್ಲಿ ಒಂದು ಕಾಲದಲ್ಲಿ ನಾನೇ ತಪ್ಪು ಮಾಡಿದ್ದೇನೆ. ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಆಗುತ್ತದೆ. ಪಕ್ಷದ ವರಿಷ್ಠರು ಎಲ್ಲರೂ ಸೇರಿ ನಿರ್ಧಾರ ಮಾಡುತ್ತಾರೆ. ರಾಜಕಾರಣದಲ್ಲಿ ಯಾವುದನ್ನು ಸ್ಪಷ್ಟವಾಗಿ ಹೇಳಲೂ ಆಗಲ್ಲ. ಆಗೋದು ಆಗುತ್ತಿರುತ್ತದೆ ಹೋಗೋದು ಹೋಗುತ್ತಿರುತ್ತದೆ ಎಂದು ಹೇಳಿದರು.
ಸಿಎಂ ಆಗೋಕೆ ಯಾರಿಗೆ ಆಸೆಯಿರಲ್ಲ. ನಮ್ಮಲ್ಲಿ ಸಿಎಂ ಅಗುವವರು ಬಹಳ ಜನ ರೇಸ್‌ನಲ್ಲಿದ್ದಾರೆ. ಅವರೆಲ್ಲ ಬಹಳ ದುಡಿದಿದ್ದಾರೆ ಅವರು ಸಿಎಂ ಆದರೆ ತಪ್ಪೇನಿದೆ? ನಮಗೆ ಸಚಿವರಾಗೋ ಆಸೆಯಿದ್ದ ಹಾಗೇ ಅವರಿಗೆ ಸಿಎಂ ಆಗೋ ಆಸೆ ಇರುತ್ತದೆ. ಸಿಎಂ ಸ್ಥಾನ ಒಂದೆಯಿದೆ. ಹತ್ತು ಸ್ಥಾನಗಳಿದ್ದರೆ ಯಾರೂ ಕೇಳುತ್ತಿರಲಿಲ್ಲ. ಸಿಎಂ ಸ್ಥಾನ ಒಂದೇ ಇದ್ದರೂ ಹಿರಿಯ ಮೂವರು ಆಕಾಂಕ್ಷಿಗಳಿದ್ದಾರೆ. ಯಾರು ಸಿಎಂ ಆಗಬೇಕೆಂದು ಸಿಎಲ್‌ಪಿ ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ಆಂತರಿಕ ವಿಚಾರ ಯಾವಾಗ ಬೇಕಾದರೂ ನಿರ್ಣಯವಾಗುತ್ತದೆ. ಈ ವಿಚಾರಕ್ಕಾಗಿ ನಾನು ದೆಹಲಿಗೆ ಹೋಗಿಲ್ಲ. ಕಬ್ಬು ಮೆಕ್ಕೆಜೋಳ ಬೆಂಬಲ ಬೆಲೆ ವಿಚಾರಕ್ಕೆ ದೆಹಲಿಗೆ ಹೋಗಿದ್ದೆ. ನಾನು ಸಿಎಂ ಸಿದ್ದರಾಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಎಲ್ಲರೊಂದಿಗೂ ಆತ್ಮೀಯನಾಗಿದ್ದೇನೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪರ ಮತ ಹಾಕಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಯಾರ ಹಣೆಬರಹದಲ್ಲಿ ಐದು ವರ್ಷ ಇದೆ, ಅವರು ಐದು ವರ್ಷ ಇರುತ್ತಾರೆ. ಯಾರ ಹಣೆ ಬರಹದಲ್ಲಿ ಎರಡೂವರೆ ವರ್ಷವಿದೆ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು. ಮತ್ತಷ್ಟು ಚೆನ್ನಾಗಿ ಮಾಡಿದರೆ ಇನ್ನೂ ಅಧಿಕಾರ ಸಿಗಬಹುದು ಎಂದರು.
ರಾಜ್ಯ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಭೇಟಿ ವಿಚಾರದ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಸರ್ವೋಚ್ಚ ನಾಯಕರು, ಅವರ ಜೊತೆ ಸಚಿವರು, ಕಾರ್ಯಕರ್ತರು ಇರುತ್ತಾರೆ. ಶಾಸಕರ ದೆಹಲಿ ಭೇಟಿ ವಿಚಾರ ಆಂತರಿಕ ವಿಚಾರವೆಂದ ಸಚಿವರು, ಸರ್ವಾನುಮತದ ಅಭಿಪ್ರಾಯ ಬಂದಾಗ ಅಧಿಕಾರ ಹಂಚಿಕೆ ವಿಚಾರ ನಿರ್ಣಯವಾಗುತ್ತದೆ ಎಂದರು.ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆಶಿ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದರಲ್ಲಿ ತಪ್ಪೇನಿದೆ?. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ರಾಜ್ಯದ ವರಿಷ್ಠರು. ಇತರೆ ವಿಚಾರ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು.
ಶಾಸಕರಿಗೆ ₹50 ಕೋಟಿ ಕೊಡಲಾಗುತ್ತಿದೆ ಎಂಬುದು ಸುಳ್ಳು, ಈ ಕುರಿತು ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದ್ದು ಸುಳ್ಳು ಎಂದರು. ಆರೋಪ ಮಾಡುವವರು ಸಾಕ್ಷಿ ಸಮೇತ ಸಾಬೀತು ಮಾಡಬೇಕು. ಇದು ಮಕ್ಕಳಾಟವೇ ಎಂದು ವ್ಯಂಗ್ಯವಾಡಿದರು. ನಮ್ಮ ಪಕ್ಷದಲ್ಲಿ ಆಮಿಷಕ್ಕೆ ಒಳಗಾಗುವವರು ಯಾರೂ ಇಲ್ಲ. ಯಾರಿಗೆ ಕೊಟ್ಟು ರೂಢಿಯಿದ್ದವರು ಇದನ್ನು ಹೇಳಿಕೊಂಡು ಹೋಗಲಿ ಎಂದು ಕಾರಜೋಳಗೆ ತಿರುಗೇಟು ನೀಡಿದರು.ಹೈಕಮಾಂಡ್ ಜೊತೆಗೆ ಅಧಿಕಾರ ಹಂಚಿಕೆ ಕುರಿತು ಚರ್ಚೆ ಮಾಡಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೇಳಿದ್ದರಲ್ಲಿ ತಪ್ಪಿಲ್ಲ. ಸಚಿವ ಸಂಪುಟ ಪುನಾರಚನೆ ಮಾಡಿದರೆ ತಪ್ಪಿದೆಯಾ? ಅವರು ಸಿಎಂ ಇದ್ದಾರೆ ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ಅಧಿಕಾರ. ಅವರು ತಮ್ಮ ಅಧಿಕಾರವನ್ನು ಯಾವಾಗ ಬೇಕಾದರೂ ಚಲಾವಣೆ ಮಾಡಬಹುದು. ಐದು ವರ್ಷ ನಾನೇ ಸಿಎಂ ಹಾಗೂ ಬಜೆಟ್ ಮಂಡನೆ ಮಾಡುತ್ತೇನೆಂದು ಸಿಎಂ ಹೇಳಿದ್ದರಲ್ಲಿ ತಪ್ಪಿಲ್ಲ ಎಂದರು.
ಸಿಎಂ ಬದಲಾವಣೆಗಾಗಿಯೇ ಶಾಸಕರು ದೆಹಲಿಗೆ ಹೋಗಿದ್ದು ಎಂಬ ಕೈ ಶಾಸಕನ ಹೇಳಿಕೆ ವಿಚಾರಕ್ಕೆ, ಕಾಂಗ್ರೆಸ್ ಶಾಸಕ ಶಿವಗಂಗಾ ಓರ್ವ ಮಾತ್ರ ಹೇಳಿದರೆ ಎಲ್ಲರೂ ಹೇಳಿದಂತೆಯಾ? ಎಂದು ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.