ಏ.12.13ಕ್ಕೆ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Mar 9, 2025 1:46 AM

ಸಾರಾಂಶ

ತಾಲೂಕಿನ ಕನಸವಾಡಿಯಲ್ಲಿ ಏಪ್ರಿಲ್ 12 ಮತ್ತು 13ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನ ಕೈಗೊಂಡಿದ್ದು, ಕನ್ನಡದ ಕಾಯಕಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಕನಸವಾಡಿಯಲ್ಲಿ ಏಪ್ರಿಲ್ 12 ಮತ್ತು 13ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನ ಕೈಗೊಂಡಿದ್ದು, ಕನ್ನಡದ ಕಾಯಕಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದ ಬಳಿಕ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಈ ಹಂತದಲ್ಲಿ ನಿಯಮಾವಳಿಯಂತೆ ಅಗತ್ಯ ಸಹಕಾರ ನೀಡಲಾಗುವುದು. ಇಲಾಖಾ ಯೋಜನೆಗಳ ಕುರಿತ ವಸ್ತು ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು. ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿರುವ ಹಿನ್ನಲೆ ಎಲ್ಲ ತಾಲೂಕುಗಳಿಗೂ ಅಗತ್ಯ ಅವಕಾಶಗಳನ್ನು ನೀಡಬೇಕಿದೆ. ದೊಡ್ಡಬಳ್ಳಾಪುರ ತಹಸೀಲ್ದಾರ್‌ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ ಪೂರ್ವ ಸಿದ್ದತೆಗಳನ್ನು ಪರಿವೀಕ್ಷಿಸಲು ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಸಮ್ಮೇಳನದ ರೂಪರೇಶೆ ಮತ್ತು ನಿರೀಕ್ಷಿತ ವೆಚ್ಚಗಳ ಕುರಿತು ಪ್ರಸ್ತಾಪಿಸಿದರು. 2 ದಿನಗಳ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಚಳವಳಿ, ಸಮಕಾಲೀನ ಸವಾಲುಗಳು ಸೇರಿದಂತೆ ವಿವಿಧ ವಿಚಾರಗಳ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯಿಕ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಪರಿಷತ್ತಿನ ನಿಯಮಾವಳಿಯಂತೆ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾ ಸಮ್ಮೇಳನ ಆಯೋಜಿಸಲು ಈ ಬಾರಿ ದೊಡ್ಡಬಳ್ಳಾಪುರ ತಾಲೂಕಿಗೆ ಅವಕಾಶ ನೀಡಲಾಗಿದ್ದು, ಸಮ್ಮೇಳನದ ಪೂರ್ವಭಾವಿಯಾಗಿ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳ ಸಭೆ ನಡೆಸಲು ತಾಲೂಕು ಘಟಕಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಅಶ್ವತ್ಥಗೌಡ, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನೆಲಮಂಗಲ ತಾಲೂಕು ಅಧ್ಯಕ್ಷ ಪ್ರಕಾಶ್‌ ಮೂರ್ತಿ, ಹೊಸಕೋಟೆ ತಾಲೂಕು ಅಧ್ಯಕ್ಷ ಮುನಿರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ನಂಜೇಗೌಡ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯಕ್ ಉಪಸ್ಥಿತರಿದ್ದರು.

Share this article