ಬಂಗಾರಪ್ಪ ನೇರ, ನಿಷ್ಠುರ ರಾಜಕಾರಣಿ, ಸಚಿವ ಎಚ್ ಕೆ ಪಾಟೀಲ್

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ಜಿಲ್ಲೆಯಿಂದ ಸಿಎಂ ಗಾದಿ ಏರಿದವರಲ್ಲಿ ಸಾರೇಕೊಪ್ಪ ಬಂಗಾರಪ್ಪ ಕೂಡ ಒಬ್ಬರು. ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗಳ ಮೂಡಿಸಿರುವ ಅವರ ವ್ಯಕ್ತಿತ್ವ ವರ್ಣರಂಜಿತವೇ ಸರಿ. ಜನಪರ ಯೋಜನೆಗಳಿಮದ ಬಡವರ ಬಂಧು ಎನಿಸಿದ್ದ ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಸೊರಬದ ಬಂಗಾರಧಾಮದಲ್ಲಿ ಬಂಗಾರಪ್ಪ ಸವಿನೆನಪು ಕಾರ್ಯಕ್ರಮ ಹೆಸರಿನಲ್ಲಿ ಮಂಗಳವಾರ ಸಂಪನ್ನಗೊಂಡಿದೆ.

ಕನ್ನಡಪ್ರಭ ವಾರ್ತೆ ಸೊರಬ

ಬಂಗಾರಪ್ಪ ಅವರು ಸಾರ್ವಜನಿಕ ಜೀವನದಲ್ಲಿ ನೇರ, ನಿಷ್ಠುರತೆ ಮೂಲಕ ಛಾಪು ಮೂಡಿಸಿ ಅಖಂಡ ಕರ್ನಾಟಕದಲ್ಲಿ ಅತ್ಯಂತ ಅಭಿಮಾನಿಗಳನ್ನು ಹೊಂದಿದ ನಾಯಕರಾಗಿದ್ದರು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಪಟ್ಟಣದ ಬಂಗಾರ ಧಾಮದಲ್ಲಿ ಬಂಗಾರಪ್ಪ ಫೌಂಡೇಷನ್ ಹಾಗೂ ಬಂಗಾರಪ್ಪ ಅಭಿಮಾನಿ ಬಳಗದಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಗಾರಪ್ಪ ಸವಿನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪಟ ಸಮಾಜವಾದಿ ಆಗಿದ್ದ ಬಂಗಾರಪ್ಪ ಅವರು, ಅನೇಕರಿಗೆ ರಾಜಕಾರಣದ ಮೆಟ್ಟಿಲಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೊಸ ಪಕ್ಷ ಕಟ್ಟಿ ಎದೆಗಾರಿಕೆ ಪ್ರದರ್ಶಿಸಿದ ಅಪರೂಪದ ರಾಜಕಾರಣಿ. ಬಡವರನ್ನು ಗಮನದಲ್ಲಿಟ್ಟುಕೊಂಡು ಆಶ್ರಯ, ಆರಾಧನಾ, ವಿಶ್ವ ಯೋಜನೆಗಳನ್ನು ಜಾರಿಗೊಳಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಹೊತ್ತಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರೆ ಅದು ಬಂಗಾರಪ್ಪ ಒಬ್ಬರೇ ಎಂದು ಸ್ಮರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಬಂಗಾರಪ್ಪ ಅವರು ಕಾರ್ಯ ಚಟುವಟಿಕೆಯಿಂದಾಗಿ ಹಾಗೂ ವಿಚಾರಧಾರೆಯಿಂದ ನಮ್ಮ ನಡುವೆ ಇನ್ನೂ ಬದುಕಿದ್ದಾರೆ. ಅವರ ಅನುಭವ ಮತ್ತು ಆದರ್ಶದಿಂದಾಗಿ ರಾಜಕಾರಣದಲ್ಲಿ ನಾನು ಈ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗಿದೆ. ಉತ್ತರ ಕರ್ನಾಟಕದಲ್ಲಿ ಬಂಗಾರಪ್ಪ ಎಂದರೆ ದೈವತ್ವ ಭಾವನೆ ಇದೆ. ತಂದೆ- ತಾಯಿಯರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ ಸ್ಮಾರಕವನ್ನು ನಿರ್ಮಿಸಿರುವ ಮಧು ಬಂಗಾರಪ್ಪ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬಂಗಾರಪ್ಪ ಜೀವಿತಾವಧಿಯವರೆಗೂ ಸಕ್ರಿಯ ರಾಜಕಾರಣಯಾಗಿ ಬಡವರ ಪರ ಕಾಳಜಿ ಹೊಂದಿದ್ದರು. ಅವರು ಬಿಜೆಪಿಗೆ ಬಂದಾಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿದ್ದು ನನ್ನ ಸುದೈವ. ಜನನಾಯಕರಾಗಿ ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಕೆಳವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಮ್ಮ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದರು. ದಲಿತರ ಹಿಂದುಳಿದವರ ಪರವಾದ ಆಡಳಿತವನ್ನು ನೀಡಿ, ಬಡಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ದಿನಕ್ಕೆ ₹1 ನೀಡುವ ಯೋಜನೆ ಜಾರಿಗೆ ತಂದಿದ್ದರು. ಕಾವೇರಿ ವಿಷಯದಲ್ಲಿ ಎದೆಗಾರಿಕೆ ನಿರ್ಣಯ ಕೈಗೊಂಡ ಧೀಮಂತ ನಾಯಕರಾಗಿದ್ದರು. ತಂದೆ ಹಾದಿಯಲ್ಲಿ ನಡೆಯುತ್ತಿರುವ ಮಧು ಬಂಗಾರಪ್ಪ ಕಾರ್ಯ ಶ್ಲಾಘನೀಯ ಎಂದರು.

ಸಚಿವ ಎಸ್. ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಗಾರಪ್ಪ ನವರ ಚಿಂತನೆ ವಿಚಾರಗಳು ನಾಡಿನ ಜನತೆಗೆ ತಲುಪಬೇಕು. ಈ ಸ್ಮಾರಕವನ್ನು ನಿರ್ಮಿಸಲು ಹೆಚ್ಚು ಅವಧಿಯನ್ನು ತೆಗೆದುಕೊಂಡಿದ್ದಕ್ಕೆ ಕ್ಷಮೆಯನ್ನು ಕೇಳುತ್ತೇನೆ. ಈ ಧಾಮವು ಸ್ಫೂರ್ತಿಯ ನೆಲೆಯಾಗಬೇಕು. ಬಂಗಾರಪ್ಪ ಅವರ ಜನತೆಯ ನಡುವೆ ಇರುವ ನಾಯಕರಾಗಿದ್ದರು. ಅವರ ಹೆಸರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕಾರ್ಯವನ್ನು ಮಾಡುತ್ತೇನೆ. ಬಂಗಾರಪ್ಪನವರ ಚಿಂತನೆ ಒಂದು ಅಧ್ಯಯನ ಪೀಠವಾಗಬೇಕು ಎಂದರು.

ಈ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಕಲಗೋಡು ರತ್ನಾಕರ, ರಮೇಶ್, ವೆಂಕಟೇಶ್, ವೇಣುಗೋಪಾಲ್, ಎಚ್.ಗಣಪತಿ, ಎಂ.ಡಿ. ಶೇಖರ್, ಕೆ.ವಿ.ಗೌಡ, ಕೆ.ಪಿ.ರುದ್ರಗೌಡ, ಆರ್.ಸಿ. ಪಾಟೀಲ್, ಸುರೇಶ್ ಬಿಳವಾಣಿ, ಪ್ರಭಾಕರ್, ರವಿ ಬರಗಿ ಮೊದಲಾದವರು ಉಪಸ್ಥಿತರಿದ್ದರು.

- - - ಬಾಕ್ಸ್ ಬಂಗಾರಪ್ಪಗೆ ಬಿಜೆಪಿ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಲಿಂಬಾವಳಿಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜಿ ರಾಜಕಾರಣ ಎಂದೂ ಮಾಡದ ಎಸ್.ಬಂಗಾರಪ್ಪ ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬಿಜೆಪಿಯಲ್ಲಿ ಆತ್ಮಗೌರವಕ್ಕೆ ಬೆಲೆ ಇಲ್ಲದ ವಿಷಮ ವಾತಾವರಣ ಇದೆ. ಈ ಕಾರಣದಿಂದಲೇ ಎಸ್. ಬಂಗಾರಪ್ಪ ಪಕ್ಷ ತೊರೆಯುವಂತಾಗಿತ್ತು ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು.

ಬಂಗಾರಪ್ಪ ಅವರು ಬಿಜೆಪಿಗೆ ಬರುವ ಮೊದಲು ರಾಜ್ಯದಲ್ಲಿ ಕೇವಲ 44 ಸ್ಥಾನಗಳನ್ನು ಹೊಂದಿತ್ತು. ಬಂಗಾರಪ್ಪ ಬಂದ ಮೇಲೆ ವಿಧಾನಸಭಾ ಸ್ಥಾನಗಳು ಅಧಿಕವಾಗಿ ಯಡಿಯೂರಪ್ಪ ಅವರಂಥವರು ಮುಖ್ಯಮಂತ್ರಿ ಆಗುವ ಭಾಗ್ಯ ಬಂದಿದೆ. ಶಿವಮೊಗ್ಗದಲ್ಲಿ ಇಬ್ಬರು ಹಿರಿಯ ರಾಜಕಾರಣಿಗಳು ಪೈಪೋಟಿಯಲ್ಲಿ ವಾಣಿಜ್ಯ ನಿವೇಶನಗಳ ಖರೀದಿಸಿದ್ದಾರೆ. ಆದರೆ, ರಸ್ತೆಯ ಬದಿಯಲ್ಲೇ ಇರುವ ಬಂಗಾರಪ್ಪ ಧಾಮವನ್ನು ವಾಣಿಜ್ಯೀಕರಣಗೊಳಿಸದೇ ಸಾರ್ವಜನಿಕ ಸೇವೆಗೆ ಅಣಿಮಾಡಿಕೊಟ್ಟಿರುವುದು ಮಧು ಬಂಗಾರಪ್ಪ ಅವರ ಹೆಗ್ಗಳಿಕೆ ಎಂದು ಲಿಂಬಾವಳಿ ಹೇಳಿದರು.

- - - -26ಕೆಪಿಸೊರಬ04:

ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಚಿವ ಎಚ್.ಕೆ. ಪಾಟೀಲ್ ಗಿಡಕ್ಕೆ ನೀರೆರೆಯು ಮೂಲಕ ಉದ್ಘಾಟಿಸಿದರು.

Share this article