ಡಿಕೆಸು ಹೆಸರಲ್ಲಿ ವಂಚಿಸಿದ ಬಂಗಾರಿ ದಂಪತಿ ಬಂಧನ

KannadaprabhaNewsNetwork | Published : Dec 29, 2024 1:19 AM

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಎಂದು ನಂಬಿಸಿ ಚಿನ್ನದಂಗಡಿ ಮಾಲಕಿಯಿಂದ ಬರೋಬ್ಬರಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ವಂಚಿಸಿದ್ದ ಆರೋಪದ ಸಂಬಂಧ ಐಶ್ವರ್ಯಾ ಗೌಡ ದಂಪತಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಎಂದು ನಂಬಿಸಿ ಚಿನ್ನದಂಗಡಿ ಮಾಲಕಿಯಿಂದ ಬರೋಬ್ಬರಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ವಂಚಿಸಿದ್ದ ಆರೋಪದ ಸಂಬಂಧ ಐಶ್ವರ್ಯಾ ಗೌಡ ದಂಪತಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರ ನಿವಾಸಿಗಳಾದ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್‌ ಬಂಧಿತರು. ವಾರಾಹಿ ವರ್ಲ್ಡ್ ಗೋಲ್ಡ್‌ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್‌.ಐತಾಳ್‌ ಡಿ.23ರಂದು ಐಶ್ವರ್ಯಾ ಗೌಡ, ಹರೀಶ್‌ ಮತ್ತು ನಟ ಧರ್ಮೇಂದ್ರ ವಿರುದ್ಧ ವಂಚನೆ ಸಂಬಂಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಬ್ಲ್ಯಾಕ್‌ ಮೇಲ್‌, ಜೀವ ಬೆದರಿಕೆ ಸೇರಿ ವಿವಿಧ ಕಲಂಗಳಡಿ ಎಫ್‌ಐಆರ್‌ ದಾಖಲಾಗಿತ್ತು.

ಪ್ರಕರಣದ ತನಿಖೆ ಆರಂಭಿಸಿರುವ ಚಂದ್ರಾಲೇಔಟ್‌ ಠಾಣೆ ಪೊಲೀಸರು ಈ ಸಂಬಂಧ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಮೂವರು ಆರೋಪಿಗಳಿಗೂ ನೋಟಿಸ್‌ ಜಾರಿಗೊಳಿಸಿದ್ದರು. ಅದರಂತೆ ಬೆಳಗ್ಗೆ ಐಶ್ವರ್ಯಾ ಗೌಡ ಮತ್ತು ಹರೀಶ್‌ ಇಬ್ಬರೂ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಆಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಂಗ ಬಂಧನ:

ಬಂಧಿತ ಆರೋಪಿಗಳನ್ನುನಿಯಮಾನುಸಾರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿ, ಬಳಿಕ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸೋಮವಾರ ರಿಮ್ಯಾಂಡ್‌ ಅಪ್ಲಿಕೇಶನ್‌ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿ, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು. ಹೀಗಾಗಿ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಸಿದ್ದಾರೆ. ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ವಂಚನೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ರಿಮ್ಯಾಂಡ್‌ ಅಪ್ಲಿಕೇಶನ್‌ ಸಿದ್ಧಪಡಿಸುತ್ತಿರುವ ಪೊಲೀಸರು, ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ಧರ್ಮನಿಗಾಗಿ ಶೋಧ:

ಮತ್ತೊಬ್ಬ ಆರೋಪಿ ನಟ ಧರ್ಮೇಂದ್ರ ಅಲಿಯಾಸ್‌ ಧರ್ಮ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಗೆ ನೋಟಿಸ್‌ ನೀಡಲು ಮನೆ ಬಳಿ ತೆರಳಿದ್ದಾಗ ಮನೆಯಲ್ಲಿರಲಿಲ್ಲ. ಹೀಗಾಗಿ ಶನಿವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಅನ್ನು ಆತನ ಮನೆ ಗೋಡೆಗೆ ಅಂಟಿಸಿದ್ದರು. ಆದರೆ, ಆತ ವಿಚಾರಣೆಗೆ ಗೈರು ಹಾಜರಾಗಿದ್ದಾನೆ. ಹೀಗಾಗಿ ಪೊಲೀಸರು ಆರೋಪಿ ಧರ್ಮನ ಬಂಧನಕ್ಕೆ ಶೋಧ ಮುಂದುವರೆಸಿದ್ದಾರೆ.

ಪ್ರಕರಣದ ಹಿನ್ನೆಲೆ

ವಾರಾಹಿ ವರ್ಲ್ಡ್‌ ಗೋಲ್ಡ್‌ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್‌.ಐತಾಳ್‌ ನೀಡಿದ ದೂರಿನಲ್ಲಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್‌ ನನಗೆ ಪರಿಚಿತರು. ಐಶ್ವರ್ಯಾ ಮಾಜಿ ಸಂಸದ ಡಿ.ಕೆ.ಸುರೇಶ್‌ ಸೋದರಿ ಎಂದು ನನಗೆ ನಂಬಿಸಿ ಸ್ನೇಹ ಸಂಪಾದಿಸಿದ್ದಳು. ಬಳಿಕ ಐಶ್ವರ್ಯಾ ಮತ್ತು ಆಕೆಯ ಪತಿ 2023ರ ಅ.12ರಿಂದ 2024ರ ಜ.1ರವರೆಗೆ ಹಂತ ಹಂತವಾಗಿ 14.6 ಕೆಜಿ ಚಿನ್ನಾಭರಣ ಪಡೆದಿದ್ದಾರೆ. ಹಣ ಕೊಡುವಂತೆ ಐಶ್ವರ್ಯಾಳನ್ನು ಕೇಳಿದಾಗ, ಡಿ.ಕೆ.ಸುರೇಶ್‌ ಹೆಸರಿನಲ್ಲಿ ಕರೆ ಮಾಡಿಸಿ ಕಾಲಾವಕಾಶ ಕೋರಿದರು. ಬಳಿಕ ಅದು ವಂಚನೆ ಎಂದು ಗೊತ್ತಾಯಿತು. ಈ ಬಗ್ಗೆ ಪ್ರಶ್ನಿಸಿದಾಗ, ನೀನು ನನಗೆ ಪದೇ ಪದೆ ಕರೆ ಮಾಡಿದರೆ ಸರಿ ಇರುವುದಿಲ್ಲ. ನಿನ್ನ ಅಂಗಡಿಗೆ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿ ಐಶ್ವರ್ಯಾ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

Share this article