ಸಂಡೂರು: ನಾವು ಪರವಾನಗಿ ಪಡೆದು, ರಾಜಧನ ಪಾವತಿಸಿ ತಾಲೂಕಿನ ಯರ‍್ರಯ್ಯನಹಳ್ಳಿಯಲ್ಲಿ ಗ್ರಾವೆಲ್ ಸಾಗಾಟ ಮಾಡಿದ್ದೇವೆ. ಆದಾಗ್ಯೂ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಪದೇಪದೇ ಸುದ್ದಿಗೋಷ್ಠಿ ನಡೆಸಿ, ಅಕ್ರಮವಾಗಿ ಗ್ರಾವೆಲ್ ಸಾಗಿಸಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಗುತ್ತಿಗೆದಾರ ರಮೇಶ್ ಗಡಾದ್ ದೂರಿದರು.
ಯರ‍್ರಯ್ಯನಹಳ್ಳಿ ೩-೪ ಲಕ್ಷ ಟನ್ ಗ್ರಾವೆಲ್ ಅಕ್ರಮವಾಗಿ ಹಾಗೂ ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಸುಮಾರು ೮ ಸಾವಿರ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಆರೋಪಿಸಿದ್ದನ್ನು ವಿರೋಧಿಸಿ ಗಡಾದ್ ರಮೇಶ್ ಈ ರೀತಿ ಪ್ರತಿಕ್ರಿಯಿಸಿದರು.
ಯರ‍್ರಯ್ಯನಹಳ್ಳಿಯಲ್ಲಿ ಗ್ರಾವೆಲ್ ಸಾಗಾಣಿಕೆ ವಿಷಯಕ್ಕೆ ಸಂಬಂಧಿಸಿ ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಾಗಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಜಿ.ಟಿ. ಪಂಪಾಪತಿ ಮೇಲೆಯೇ ೧೮ ಕ್ರಿಮಿನಲ್ ಪ್ರಕರಣಗಳಿವೆ ಎಂದು ದೂರಿದರು.ಈ ಹಿಂದೆ ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಸುಮಾರು ೨೦ ವರ್ಷಗಳಿಂದ ಲೋಡಿಂಗ್ ಬಿಸಿನೆಸ್ ಮಾಡುತ್ತಿದ್ದೆ ಎಂದು ಜಿ.ಟಿ. ಪಂಪಾಪತಿ ಅವರೇ ಒಪ್ಪಿಕೊಂಡಿದ್ದಾರೆ. ಒಂದು ರೇಖ್‌ಗೆ ೨೦೦ ರಿಂದ ೩೦೦ ಟನ್‌ವರೆಗೂ ಅದಿರು ಉಳಿಯುತ್ತದೆ ಎಂದು ತಾವೇ ಹೇಳಿಕೆ ನೀಡುತ್ತಾರೆ. ಹಾಗಾದರೆ ಉಳಿದಿರುವ ಅದಿರನ್ನು ಎಲ್ಲಿ ಶೇಖರಣೆ ಮಾಡಿದ್ದೀರಿ? ಎಲ್ಲಿ ಕಳ್ಳ ಸಾಗಾಣಿಕೆಯಾಗಿದೆ? ಲೆಕ್ಕ ಕೊಡಿ. ಇಲ್ಲವಾದರೆ, ಈ ಕಳ್ಳದಂಧೆಯಲ್ಲಿ ನೀವೇ ಭಾಗಿಯಾಗಿರುವುದು ಖಚಿತವಾಗುತ್ತದೆ ಎಂದು ದೂರಿದರು.
ಗುತ್ತಿಗೆದಾರರಾದ ರಂಗಪ್ಪ, ಮಹೇಶ್ ಮಾತನಾಡಿ, ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ಅಕ್ರಮವಾಗಿ ಅದಿರು ಸಾಗಾಟವಾಗಿದೆ ಎಂದು ಬಂಗಾರು ಹನುಮಂತು, ಪಂಪಾಪತಿ ಹೇಳುತ್ತಿದ್ದಾರೆ. ಅಲ್ಲಿನ ಅದಿರು ಯಾರಿಗೆ ಸೇರಿದ್ದು? ಅದರ ಮಾಲೀಕ ಯಾರು? ಅಕ್ರಮವಾಗಿ ಅದಿರಿನ ಸಾಗಾಣಿಕೆ ನಡೆದಿದ್ದರೆ ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ದೂರು ನೀಡಲಿ. ಈ ಪ್ರಕರಣವನ್ನು ಇಡಿ ಅಥವಾ ಸಿಬಿಐಗಾದರೂ ಕೊಡಲಿ. ಸತ್ಯ ಹೊರಬರುತ್ತದೆ ಎಂದರು. ಮುಖಂಡರಾದ ಗಂಟಿ ಕುಮಾರಸ್ವಾಮಿ, ಮರೆಗೌಡ, ತಿಮ್ಮಪ್ಪ, ಭರಮರೆಡ್ಡಿ ಇದ್ದರು.