ಬಾಂಗ್ಲಾ ಮೂಲದ ಮಹಿಳೆ ಹತ್ಯೆ ಕೇಸ್‌: ಆರೋಪಿ ಸೆರೆ

KannadaprabhaNewsNetwork | Published : Feb 5, 2025 12:31 AM

ಸಾರಾಂಶ

ಇತ್ತೀಚೆಗೆ ಕಲ್ಕೆರೆ ನಿರ್ಜನ ಪ್ರದೇಶದಲ್ಲಿ ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಇತ್ತೀಚೆಗೆ ಕಲ್ಕೆರೆ ನಿರ್ಜನ ಪ್ರದೇಶದಲ್ಲಿ ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಾಗಲಕೋಟೆ ಮೂಲದ ಮುದುಕಪ್ಪ(30) ಬಂಧಿತ. ಆರೋಪಿಯು ಜ.23ರಂದು ಬಾಂಗ್ಲಾ ಮೂಲದ ನಜ್ಮಾ(28) ಎಂಬಾಕೆಯನ್ನು ಕಲ್ಕೆರೆ ಕೆರೆಯ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿ ಹತ್ಯೆ ಮಾಡಿ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ನೀರು ಹಾಕುವಾಗ ನಜ್ಮಾ ಮೇಲೆ ಕಣ್ಣಿಟ್ಟಿದ್ದ:ಆರೋಪಿ ಮುದುಕಪ್ಪ ವಾಟರ್‌ ಟ್ಯಾಂಕರ್‌ ಚಾಲಕನಾಗಿದ್ದಾನೆ. ನಗರದ ರಾಮಮೂರ್ತಿನಗರ. ಕೊತ್ತನೂರು ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳು, ಅಂಗಡಿಗಳು, ಜೋಪಡಿಗಳಿಗೆ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದ. ಬಾಂಗ್ಲಾ ಮೂಲದ ನಜ್ಮಾ ಹಾಗೂ ಆಕೆಯ ಪತಿ ಸುಮನ್‌ ದಂಪತಿ ತಮ್ಮ 3 ಮಕ್ಕಳೊಂದಿಗೆ ಕೊತ್ತನೂರಿನ ಕೃಷ್ಣಪ್ಪ ಲೇಔಟ್‌ನ ಶೆಡ್‌ನಲ್ಲಿ ನೆಲೆಸಿದ್ದರು. ಈ ಶೆಡ್‌ಗಳಿಗೂ ಮುದುಕಪ್ಪ ನೀರು ಪೂರೈಕೆ ಮಾಡುತ್ತಿದ್ದ. ಈ ವೇಳೆ ನಜ್ಮಾಳನ್ನು ನೋಡಿದ್ದ. ಒಂದೆರೆಡು ಬಾರಿ ಮಾತನಾಡಿಸಿದ್ದ. ಬಳಿಕ ನಜ್ಮಾ ಮೇಲೆ ಕಣ್ಣಿಟ್ಟಿದ್ದ ಆರೋಪಿಯು ಆಕೆ ಕೆಲಸ ಮಾಡುವ ಸ್ಥಳ, ಓಡಾಡುವ ರಸ್ತೆಗಳನ್ನು ನೋಡಿಕೊಂಡು ನಿಗಾವಹಿಸಿದ್ದ.ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ, ಹತ್ಯೆ:ನಜ್ಮಾ ಜ.23ರಂದು ಕಲ್ಕೆರೆಯ ಡಿಎಸ್‌ಆರ್‌ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆ ಕಡೆಗೆ ಹೊರಟ್ಟಿದ್ದಳು. ಕಲ್ಕೆರೆ ಕೆರೆಯ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಬರುವಾಗ, ಹಿಂಬಾಲಿಸಿರುವ ಆರೋಪಿ ಮುದುಕಪ್ಪ, ನಜ್ಮಾಳನ್ನು ಕೆರೆ ದಡದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಗುರುತು ಸಿಗದಂತೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ.

ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ:

ಮಾರನೇ ದಿನ ದಾರಿಹೋಕರು ಕಲ್ಕೆರೆ ಕೆರೆ ದಡದ ಪೊದೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂಬಂಧ ಮೃತಳ ಪತಿ ಸುಮನ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ಸುಳಿವು ಆಧರಸಿ ಬಂಧನ:ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಕೆರೆಯ ಪಕ್ಕದ ರಸ್ತೆಯಲ್ಲಿ ಐದಾರು ಮಂದಿ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡು ಬಂದಿತ್ತು. ಇದರಲ್ಲಿ ಆರೋಪಿ ಮುದುಕಪ್ಪನ ಚಲನವಲನ ಸೆರೆಯಾಗಿತ್ತು. ಹೀಗಾಗಿ ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ನಜ್ಮಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. - ಬಾಕ್ಸ್‌-ಹತ್ಯೆಯಾದ ನಜ್ಮಾ ಅಕ್ರಮ ವಾಸಿ:

ಬಾಂಗ್ಲಾ ಮೂಲದ ಸುಮನ್‌ ಮತ್ತು ನಜ್ಮಾ 6 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ದಂಪತಿ ಮೂವರು ಮಕ್ಕಳಿವೆ. ಸುಮನ್‌ ಬಿಬಿಎಂಪಿ ಕಸದ ಯಾರ್ಡ್‌ನಲ್ಲಿ ಕೆಲಸ ಮಾಡಿದರೆ, ನಜ್ಮಾ ಡಿಎಸ್‌ಆರ್‌ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಸುಮನ್‌ ಪಾಸ್‌ಪೋರ್ಟ್‌ ಮೂಲಕ ಭಾರತಕ್ಕೆ ಬಂದಿದ್ದಾನೆ. ಆದರೆ, ನಜ್ಮಾ ಅಕ್ರಮವಾಗಿ ಭಾರತಕ್ಕೆ ಬಂದು ಪತಿ ಜತೆಗೆ ನೆಲೆಸಿದ್ದಳು.

-ಕೋಟ್‌-ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಮತ್ತು ಗಡಿಪಾರು ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ಅಕ್ರಮ ವಲಸಿಗರು ಮಾತ್ರವಲ್ಲದೇ ಆಫ್ರಿಕಾ ಮೂಲದವರು ನಗರದಲ್ಲಿ ಅಕ್ರಮವಾಗಿ ನೆಲೆಸಿ ಅಪರಾಧ ಚಟುವಟಿಕೆಗಳು, ಡ್ರಗ್ಸ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದಾರೆ. ಇಂತವರನ್ನು ಪತ್ತೆಹಚ್ಚಿ ಗಡಿಪಾರು ಮಾಡುವ ಕೆಲಸವಾಗುತ್ತಿದೆ.

- ಬಿ.ದಯಾನಂದ, ನಗರ ಪೊಲೀಸ್‌ ಆಯುಕ್ತ

Share this article