ಶಿವಮೊಗ್ಗ: ಪ್ರತಿ ವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳಬಹುದಾದ ಡೇಂಘೀ, ಚಿಕೂನ್ ಗುನ್ಯಾ ಮತ್ತು ಮಂಗನ ಕಾಯಿಲೆಯಂತಹ ರೋಗಗಳು ಉಲ್ಬಣಗೊಳ್ಳದಂತೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಯಾವುದೇ ತಾಲೂಕುಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳು ಯಾವುದೇ ಜ್ವರ ಬಂದಲ್ಲಿ ತಕ್ಷಣದ ಕ್ರಮವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.
ಜನವರಿಯಲ್ಲಿ ಜ್ವರದಿಂದ ಬಳತ್ತಿದ್ದ 390 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 28 ಜನರಲ್ಲಿ ಡೆಂಘೀ ಜ್ವರ ಇರುವುದು ಪತ್ತೆಯಾಗಿದೆ. ಅಲ್ಲದೇ ಜ್ವರದಿಂದ ಬಳಲುತ್ತಿದ್ದ 223 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 23 ಮಂದಿ ಚಿಕೂನ್‌ಗುನ್ಯಾ ಇರುವುದು ಪತ್ತೆ ಮಾಡಲಾಗಿದ್ದು, ಅವರೆಲ್ಲರಿಗೂ ಸಕಾಲಿಕವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಡೇಂಘೀ ತಪಾಸಣೆಯನ್ನು ಹೆಚ್ಚಿಸಲು ಗಮಹರಿಸಬೇಕು. ಸೋಂಕಿತರು, ಶಂಕಿತರು ಚಿಕಿತ್ಸಾಲಯಕ್ಕೆ ಬಂದಲ್ಲಿ ಯಾವುದೇ ರೋಗಿಯನ್ನು ನಿರ್ಲಕ್ಷಿಸದೇ ಸಕಾಲಿಕ ಚಿಕಿತ್ಸೆ ನೀಡಬೇಕು. ಅಲ್ಲದೇ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲಕಾಲಿಕವಾಗಿ ಲಾರ್ವಾ ಸಮೀಕ್ಷೆ ನಡೆಸಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬೇಕು ಎಂದ ಅವರು, ಡೇಂಘೀ ನಿಯಂತ್ರಣ ಕಾರ್ಯಕ್ರಮಗಳು ನಿರಂತರವಾಗಿರುವಂತೆ ಆರೋಗ್ಯಾಧಿಕಾರಿಗಳು ನೋಡಿಕೊಳ್ಳುವಂತೆ ಸೂಚಿಸಿದರು.ಕೃಷಿ ಮತ್ತು ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರು ತಮ್ಮ ಜಮೀನುಗಳ ಸಮೀಪದಲ್ಲಿ ಮಂಗಗಳ ಸಾವು ಕಂಡುಬಂದಲ್ಲಿ ನಿರ್ಲಕ್ಷ್ಯ ತೋರದೇ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು. ಗ್ರಾಮಸ್ಥರು ಸತ್ತ ಮಂಗಗಳ ವಿಲೇವಾರಿಗೆ ಮುಂದಾಗದಂತೆ ಸೂಚಿಸಿದ ಅವರು, ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
– ಡಾ.ಗುಡುದಪ್ಪ ಕುಸುಬಿ, ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ.ಮಂಗನಕಾಯಿಲೆ ಹರಡದಂತೆ ಕ್ರಮ :
ಈಗಾಗಲೇ ಮಂಗನಕಾಯಿಲೆ ಕಂಡುಬಂದ ತಾಲೂಕಗಳ ಆಯ್ದ ಪ್ರದೇಶಗಳಲ್ಲಿ ಆಯಾ ತಾಲೂಕು ವೈದ್ಯಾಧಿಕಾರಿಗಳು ಕಾಯಿಲೆ ಹರಡದಂತೆ ತಕ್ಷಣದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅದರ ನಿಯಂತ್ರಣ ಕ್ರಮವಾಗಿ ಸ್ಥಳೀಯ ನಿವಾಸಿಗಳಿಗೆ ಔಷಧಗಳನ್ನು ವಿತರಿಸಿ, ಬಳಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.ಮಂಗನ ಕಾಯಿಲೆಯನ್ನು ಸಕಾಲದಲ್ಲಿ ಪತ್ತೆಹಚ್ಚಿ ಕ್ರಮ ವಹಿಸಲು ಮಂಗಳ ಸಾವಿನ ಪ್ರಕರಣಗಳನ್ನು ಗುರುತಿಸಿ, ಪರೀಕ್ಷೆಗೊಳಪಡಿಸಬೇಕು. ಇದರಿಂದಾಗಿ ಸಕಾಲಿಕ ನಿಯಂತ್ರಣ ಕ್ರಮ ಸಾಧ್ಯವಾಗಲಿದೆ. ಅರಣ್ಯ ರಕ್ಷಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸ್ಥಳೀಯ ಗ್ರಾಪಂ ಆಡಳಿತಾಧಿಕಾರಿಗಳು ಮಂಗಗಳು ಮರಣಹೊಂದಿದ ಸ್ಥಳದಲ್ಲಿ ಸಾರ್ವಜನಿಕರು ಸಂಚರಿಸದಂತೆ ಸೂಚನಾಫಲಕಗಳನ್ನು ಅಳವಡಿಸುವಂತೆ ಹಾಗೂ ಸಕ್ರಿಯ ಉಣುಗಗಳು ಇರುವ ಸಾಧ್ಯತೆಯ ಬಗ್ಗೆ ಪ್ರಕಟಿಸುವಂತೆ ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಕಾಲಿಕ ಚಿಕಿತ್ಸೆಗಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸುಸಜ್ಜಿತವಾಗಿ 10 ಹಾಸಿಗೆಗಳನ್ನು ಕಾಯ್ದಿರಸಲಾಗಿದೆ.- ಡಾ.ನಾಗರಾಜನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು.