ಹೂವಿನಹಡಗಲಿ: ಬಂಜಾರ ಜನಾಂಗದ ಉಡುಗೆ, ತೊಡುಗೆ, ಭಾಷೆ, ಜೀವನ ಶೈಲಿ ದೇಶದ ಬುಡಕಟ್ಟು ಜನಾಂಗಗಳಲ್ಲೇ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿದೆ ಎಂದು ವೈದ್ಯ ಡಾ. ಎಲ್.ಪಿ. ಕಠಾರಿನಾಯ್ಕ ಹೇಳಿದರು.
ಬಂಜಾರರು ಕರ್ನಾಟಕ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಹರಡಿಕೊಂಡಿದ್ದಾರೆ. ಪ್ರಪಂಚದ 144 ದೇಶಗಳಲ್ಲಿ ಈ ಜನಾಂಗದವರಿದ್ದಾರೆ. ಎಲ್ಲರೂ ಆಡುವ ಭಾಷೆ ಒಂದೇ ಅದು ಗೋರ್ ಬೋಲಿ. ಇಂಡೋ ಆರ್ಯನ್ ಜನಾಂಗಕ್ಕೆ ಸೇರಿದವರಾದ ಇವರು, ಸಿಂಧೂ ನದಿಯ ನಾಗರಿಕತೆಯ ಪಟ್ಟಣಗಳಾದ ಹರಪ್ಪ ಮತ್ತು ಮಹೆಂಜೋದಾರ್‌ಗಳಲ್ಲಿ ಮೋಹನನಾಯ್ಕನ ತಾಂಡಾ, ಹರಪ್ಪನ ತಾಂಡಾಗಳಲ್ಲಿ ಈ ಜನಾಂಗ ವಾಸಿಸುತ್ತಿದ್ದ ಕುರುಹುಗಳಿದ್ದವು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ ಎಂದರು.
ರಾಥೋಡ್, ಚೌಹಾನ್, ಪವಾರ್, ಜಾಧವ್ ಕುಲಗಳಿದ್ದು, ಅನೇಕ ಗೋತ್ರಗಳನ್ನು ಹೊಂದಿವೆ. ಮುತ್ತು, ರತ್ನ ವ್ಯಾಪಾರ, ಪಶು ಸಂಗೋಪನೆ ವೃತ್ತಿಯಲ್ಲಿ ತೊಡಗಿರುವ ಇವರ ಧೈರ್ಯ, ಸ್ವಾಭಿಮಾನಕ್ಕೆ ಹೆಸರಾದ ಸಮುದಾಯ ಬ್ರಿಟಿಷರ ಅವಕೃಪೆಗೆ ಒಳಗಾಗಿ, 1871ರಲ್ಲಿ ಕ್ರಿಮಿನಲ್ ಆ್ಯಕ್ಟ್‌ನಡಿ ಆಪಾದಿತರಾಗಿ ಕಾಡು ಸೇರಿದ್ದು ಇತಿಹಾಸದ ದುರಂತ ಎಂದರು.ಹಬ್ಬ, ಹರಿದಿನ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಈ ಜನಾಂಗಗಳ ಹಾಡು, ನೃತ್ಯ, ವಿಶಿಷ್ಟ ವೈವಿಧ್ಯಮ ಆಚರಣೆಗಳಿಂದ ಈ ಸಮುದಾಯ ಹೆಸರಾಗಿದೆ ಎಂದರು.
ಕಸಾಪ ಮಾಜಿ ಅಧ್ಯಕ್ಷರು, ದತ್ತಿ ದಾನಿಗಳಾದ ಕೌಸಲ್ಯ ದೇವೇಂದ್ರನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಜಾರ ಜನಾಂಗದ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಲೆಂದು ಈ ವಿಷಯದ ದತ್ತಿ ನೀಡಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಆದರ್ಶದ ನಡೆ, ನುಡಿಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಕವನ ವಾಚಿಸುವುದರ ಮೂಲಕ ಮಾಹಿತಿ ನೀಡಿದರು.
ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಲಂಬಾಣಿ ನೃತ್ಯ ಎಲ್ಲರ ಮನಸೂರೆಗೊಂಡಿತು. ಸುನಿಲ್ ನಾಯ್ಕ ಇವರ ಜಾನಪದ ಹಾಡುಗಾರಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಗೀತ ಶಿಕ್ಷಕ ಬಿ. ಯುವರಾಜಗೌಡ ಸ್ವಾಗತಿಸಿದರು. ವಿ. ಭೀಮಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸೈಯದ್ ತೋಫಿಕ್ ವಂದಿಸಿದರು. ಶಿಕ್ಷಕ ಬಸವರಾಜ ರೊಟ್ಟಿ ನಿರ್ವಹಿಸಿದರು.