ಕಾರವಾರ: ಜಿಲ್ಲೆಯ ೫೭೭೪ ರೈತರ ಬ್ಯಾಂಕ್ ಖಾತೆಗಳಲ್ಲಿನ ಹಲವು ನ್ಯೂನತೆಗಳನ್ನು ೩ ದಿನಗಳ ಕಾಲ ಅವಿರತವಾಗಿ ಶ್ರಮಿಸಿ, ಸಮಸ್ಯೆಗಳನ್ನು ಸರಿಪಡಿಸಲಾಗಿದೆ.
ಜಿಲ್ಲೆಯ ರೈತರಿಗೆ ಇದುವರೆಗೆ ಒಟ್ಟೂ ₹೩೬.೦೬ ಕೋಟಿ ಬರ ಪರಿಹಾರ ಮೊತ್ತವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು, ಪ್ರಸ್ತುತ ಬ್ಯಾಂಕ್ ಖಾತೆ ಸಮಸ್ಯೆಯಿಂದ ಮುಕ್ತವಾಗಿರುವ ಅರ್ಹ ರೈತರಿಗೆ ಕೂಡಾ ನಿಗದಿತ ಪರಿಹಾರದ ಮೊತ್ತ ಅವರ ಖಾತೆಗಳಿಗೆ ಜಮೆ ಆಗಲಿದೆ.
ಬರ ಪೀಡಿತ ತಾಲೂಕುಗಳಾದ ಕಾರವಾರದಲ್ಲಿ ೧೩೪, ಜೋಯಿಡಾದ ೨೩೩, ಹಳಿಯಾಳದ ೧೨೬೬, ಯಲ್ಲಾಪುರದ ೨೬೯, ಮುಂಡಗೋಡದ ೪೧೨, ಶಿರಸಿಯ ೪೨೨, ಅಂಕೋಲಾದ ೧೦೫೨, ಕುಮಟಾದ ೮೧೩, ಸಿದ್ದಾಪುರದ ೫೭೨, ಭಟ್ಕಳದ ೫೪೪ ಹಾಗೂ ದಾಂಡೇಲಿಯ ೫೭ ರೈತರ ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟೂ ೫೭೭೪ ರೈತರಿಗೆ ಅವರ ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ, ಆಧಾರ್ ಮ್ಯಾಚ್ ಆಗದೇ ಇರುವುದು, ಆಧಾರ್ ಸೀಡಿಂಗ್ ಸಮಸ್ಯೆ, ಹೆಸರುಗಳ ಮಿಸ್ ಮ್ಯಾಚ್, ಅಕೌಂಟ್ ಕ್ಲೋಸ್, ಅಕೌಂಟ್ ಬ್ಲಾಕ್ ಆಗಿರುವುದು, ಫ್ರುಟ್ಸ್ ತಂತ್ರಾಂಶ ಮತ್ತು ಆಧಾರ್‌ನಲ್ಲಿನ ಹೆಸರುಗಳ ಹೋಲಿಕೆಯಾಗದೇ ಇರುವುದು, ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಮೊತ್ತ ಇದುವರೆಗೆ ಜಮೆ ಆಗಿರಲಿಲ್ಲ.ಈ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಬರಪೀಡಿತ ೧೧ ತಾಲೂಕುಗಳಲ್ಲಿನ ತಹಸೀಲ್ದಾರ್ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ತೆರೆಯುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಿತ್ತು. ಅಲ್ಲದೇ ಇದುವರೆಗೆ ವಿವಿಧ ಕಾರಣಗಳಿಂದ ಪರಿಹಾರ ಜಮೆ ಆಗದ ರೈತರ ಪಟ್ಟಿ ಮಾಡಿ, ಅವರ ದೂರವಾಣಿಗೆ ಕರೆ ಮಾಡಿ, ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಬ್ಯಾಂಕ್ ಖಾತೆ ಸಂಬಂಧಿಸಿದ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿ, ದಾಖಲೆಗಳನ್ನು ಪಡೆದು ಫಲಾನುಭವಿಗಳನ್ನು ಜತೆಯಲ್ಲಿಯೇ ಬ್ಯಾಂಕ್ ಗಳಿಗೆ ಕರೆದುಕೊಂಡು ಹೋಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.