ಈ ವರ್ಷ ದಕ್ಷಿಣ ಭಾರತದಲ್ಲೇ ಒಂದು ಲಕ್ಷದ ಆರು ಸಾವಿರ ಟೊಯೋಟಾ ಕಾರುಗಳು ಮಾರಾಟವಾಗಿದ್ದು, ಅದರಲ್ಲಿ ಬೆಂಗಳೂರಿನ ಪಾಲು ಶೇ.31ರಷ್ಟಿದೆ ಎಂದು ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ವೈಸ್‌ಲೈನ್ ಸಿಗಮಣಿ ತಿಳಿಸಿದರು.
ಸುಧೀರ ಜಿ.ಟಿ.
ಬಿಡದಿ : ಈ ವರ್ಷ ದಕ್ಷಿಣ ಭಾರತದಲ್ಲೇ ಒಂದು ಲಕ್ಷದ ಆರು ಸಾವಿರ ಟೊಯೋಟಾ ಕಾರುಗಳು ಮಾರಾಟವಾಗಿದ್ದು, ಅದರಲ್ಲಿ ಬೆಂಗಳೂರಿನ ಪಾಲು ಶೇ.31ರಷ್ಟಿದೆ ಎಂದು ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ವೈಸ್‌ಲೈನ್ ಸಿಗಮಣಿ ತಿಳಿಸಿದರು.
ಬಿಡದಿಯ ಕಾರು ಉತ್ಪಾದನಾ ಘಟಕದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶವ್ಯಾಪಿ ನೋಡಿದಾಗ ಕಾರು ಖರೀದಿಯಲ್ಲಿ ರಾಜ್ಯದ ಪ್ರಮಾಣ ಶೇ.೧೧ ರಷ್ಟಿದೆ. ಒಟ್ಟಾರೆ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದಾಗ, ಈ ವರ್ಷ ಶೇ.೩೫ರಷ್ಟು ಮಾರುಕಟ್ಟೆ ಬೆಳವಣಿಗೆ ಕಂಡಿದೆ ಎಂದು ಹೇಳಿದರು. ಜಿಎಸ್‌ಟಿ ಕಡಿತದಿಂದ ಜನರ ಕೊಳ್ಳುವಿಕೆ ಪ್ರಮಾಣ ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚಾಗಿದ್ದು, ಕಾರುಗಳನ್ನು ಕೊಳ್ಳುವವರ ಸಂಖ್ಯೆಯೂ ದ್ವಿಗುಣಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲೂ ಈ ಪ್ರಮಾಣ ಹೆಚ್ಚಿರುವ ಕಾರಣದಿಂದ ಕಂಪನಿಯ ಉತ್ಪಾದನಾ ಮಟ್ಟವೂ ಏರಿಕೆಯಾಗಿದೆ ಎಂದರು.
ಹೈಬ್ರಿಡ್ ತಂತ್ರಜ್ಞಾನ:
ಟೊಯೋಟ ಕಾರು ಕಂಪನಿಯು ತನ್ನ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದು, ಸ್ವಯಂಚಾಲಿತ ಚಾರ್ಜ್ ತಂತ್ರಾಂಶದ ಮೂಲಕ ಪರಿಸರ ಹಾಗೂ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ಸಿಗಮಣಿ, ‘ಹೈಬ್ರಿಡ್ ತಂತ್ರಾಂಶ ಒಳಗೊಂಡಿರುವ ಟೊಯೋಟಾ ಕಾರುಗಳು ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇವುಗಳ ವಿಶೇಷತೆಯೆಂದರೆ, ಈ ಕಾರುಗಳ ಬ್ಯಾಟರಿಗಳು ಸ್ವಯಂಚಾಲಿತವಾಗಿ ಚಾರ್ಜ್ ಆಗುವುದಲ್ಲದೇ, ಬ್ಯಾಟರಿ ಚಾಲಿತವಾಗಿಯೇ ವಾಹನ ಚಲಾಯಿಸಲ್ಪಡುತ್ತವೆ. ಅಲ್ಲದೆ, ಬ್ಯಾಟರಿಯ ಚಾರ್ಜ್ ಕಡಿಮೆಯಾದಾಗ ತನ್ನಿಂತಾನೆ ಪೆಟ್ರೊಲ್ ಎಂಜಿನ್‌ಗೆ ಬದಲಾಗುವ ಮೂಲಕ ಕಾರ್ಯನಿರ್ವಹಿಸುತ್ತದೆ’ ಎಂದು ಮಾಹಿತಿ ನೀಡಿದರು.
‘ನೂತನ ಹೈಬ್ರಿಡ್ ಕಾರುಗಳು ಶೇ.60 ರಷ್ಟು ಎಲೆಕ್ಟ್ರಿಕ್ ಮೂಲಕವೇ ಚಲಾಯಿಸುತ್ತವೆ. ಇದು ನಗರದಲ್ಲಿ ಏರುಗತಿಯಲ್ಲಿರುವ ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಗಟ್ಟುವಲ್ಲಿ ಗಣನೀಯ ಕೊಡುಗೆ ನೀಡುವ ಜೊತೆಗೆ ಗ್ರಾಹಕರಿಗೆ ಉತ್ತಮ ಮೈಲೇಜ್ ನೀಡುವ ಮೂಲಕ ಹಣಕಾಸಿನ ಹೊರೆಯನ್ನು ತಗ್ಗಿಸಲಿದೆ’ಎಂದು ತಿಳಿಸಿದರು.
ಗ್ರೋ ಇಂಡಿಯಾ ಗ್ರೋ ವಿತ್ ಇಂಡಿಯಾ:
ಕೇವಲ ಕಾರುಗಳ ಉತ್ಪಾದನೆ ನಮ್ಮ ಉದ್ದೇಶವಲ್ಲ. ಕಾರುಗಳ ಉತ್ಪಾದನೆ ಜತೆಗೆ, ಸಾಮಾಜಿಕ ಕಾರ್ಯಗಳ ಮೂಲಕ ಸಮಾಜದ ಬೆಳವಣಿಗೆಗೆ ಶ್ರಮಿಸುವುದು ನಮ್ಮ ಆಶಯವಾಗಿದೆ. ನಾವು ದೇಶದ ಬೆಳವಣಿಗೆಯ ಜೊತೆಗೆ ನಾವು ಬೆಳವಣಿಗೆಯಾಗಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ದೇಶವು ಬಡತನ, ನಿರುದ್ಯೋಗ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಜತೆಗೆ, ಯುವಜನರಲ್ಲಿ ದೊಡ್ಡ-ದೊಡ್ಡ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಕೌಶಲ್ಯಗಳ ಕೊರತೆ ಹೆಚ್ಚುತ್ತಿದೆ. ಸಂಸ್ಥೆಯು ಅಂತಹ ಯುವಕರಲ್ಲಿ ಕೌಶಲ್ಯ ವೃದ್ಧಿಸುವ ಜತೆಗೆ, ದೇಶದ ಇತರೆ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದೆ ಎಂದು ಟೊಯೋಟೊ ಹಣಕಾಸು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆ ವತಿಯಿಂದ ಇಲ್ಲಿಯವರೆಗೂ ಸುಮಾರು 20 ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ 125 ಸಂಸ್ಥೆಗಳನ್ನು ದತ್ತುಪಡೆದುಕೊಂಡು ಅಲ್ಲಿನ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಯಾವ ರೀತಿಯಾಗಿ ಕೌಶಲ್ಯಬೇಕು ಎಂಬುವುದನ್ನು ಅರಿತು ತರಬೇತಿ ನೀಡುವ ಕೆಲಸವನ್ನು ಮಾಡಲಾಗುತ್ತಿದೆ, ಹಾಗೂ ಪರಿಸರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮ ಕಂಪನಿಯಿಂದ ಸಾಗುತ್ತಿದೆ ಎಂದರು.
ಕಂಪನಿಯ ಬೆಳವಣಿಗೆ ಜತೆಗೆ, ಉದ್ಯೋಗಿಗಳ ಜೀವನಶೈಲಿ ಬದಲಾದರೆ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮನಗಂಡ ನಾವು ಇಲ್ಲಿಯವರೆಗೂ ಸುಮಾರು 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಜಪಾನ್‌ಗೆ ಕಳುಹಿಸಿ ತರಬೇತಿ ಕೊಡಿಸುವ ಮೂಲಕ ಹೊಸತನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜನರಲ್ ಮ್ಯಾನೇಜರ್ ಜಗದೀಶ್, ಆಡಳಿತ ವಿಭಾಗದ ಸಿಬ್ಬಂದಿ ಇದ್ದರು.
