ಸಾರಾಂಶ
ಇಂಡಿಯಾ ಎನರ್ಜಿ ವೀಕ್ 2025 ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ವಿನೂತನ ಉತ್ಪನ್ನಗಳು ಮತ್ತು ಪರಿಕಲ್ಪನೆಗಳನ್ನು ಪ್ರದರ್ಶಿಸಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು
ಫೆಬ್ರವರಿ 11 ರಿಂದ ಫೆ.14ರವರೆಗೆ ನಡೆಯುತ್ತಿರುವ ಇಂಡಿಯಾ ಎನರ್ಜಿ ವೀಕ್ 2025 ಕಾರ್ಯಕ್ರಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಭಾಗಿಯಾಗಿದೆ. ಈ ವೇಳೆ ಸಂಸ್ಥೆಯು ತನ್ನ ಅಸಾಧಾರಣ ಉತ್ಪನ್ನಗಳನ್ನು ಪ್ರದರ್ಶಿಸುವುದರ ಜೊತೆಗೆ 2070ರ ವೇಳೆಗೆ ಇಂಗಾಲ ತಟಸ್ಥತೆ ಸಾಧಿಸುವ ತನ್ನ ಧ್ಯೇಯವನ್ನು ಪುನರುಚ್ಛರಿಸಿದೆ.ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಕಡೆಗೆ ಗಮನವನ್ನು ಕೇಂದ್ರೀಕರಿಸಿರುವ ಟಿಕೆಎಂ ಸಂಸ್ಥೆಯು ತನ್ನ ಬಹು ಮಾರ್ಗ ವಿಧಾನದ ಮೂಲಕ ವಿವಿಧ ಪರ್ಯಾಯ ಇಂಧನ ಸಾರಿಗೆ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದರ ಜೊತೆಗೆ ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಂಸ್ಥೆಯು ಶ್ರಮಿಸುತ್ತಿದೆ.
ಇಂಡಿಯಾ ಎನರ್ಜಿ ವೀಕ್‌ನಲ್ಲಿ ಟೊಯೋಟಾ ಸಂಸ್ಥೆಯು ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಸ್ಎಚ್ಇವಿ) ಅನ್ನು ಪ್ರದರ್ಶಿಸುತ್ತಿದೆ. ಈ ವಿಭಾಗದಲ್ಲಿ ಇನ್ನೋವಾ ಹೈಕ್ರಾಸ್ (ಎಸ್ಎಚ್ಇವಿ) ತನ್ನ ಅಸಾಧಾರಣ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್ ಅನ್ನು ಪ್ರದರ್ಶಿಸಲಿದೆ. ಫ್ಲೆಕ್ಸ್- ಫ್ಯುಯಲ್ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಪ್ರೊಟೊಟೈಪ್ (ಎಫ್ಎಫ್ ವಿ- ಪಿಎಚ್ಇವಿ) ಅನ್ನು ಪ್ರದರ್ಶಿಸಲಾಗುತ್ತಿದ್ದು, ಈ ಮೂಲಕ ಇಂಗಾಲ ತಟಸ್ಥತೆ ಸಾಧಿಸುವ ಕಡೆಗಿನ ತನ್ನ ಕೆಲಸವನ್ನು ಕಾಣಿಸುತ್ತಿದೆ. ಅರ್ಬನ್ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ) ಕಾನ್ಸೆಪ್ಟ್ ಅನ್ನು ತಿಳಿಸಲಾಗುತ್ತಿದ್ದು, ಭವಿಷ್ಯಕ್ಕೆ ಸಲ್ಲುವ ವಿನ್ಯಾಸ ಮತ್ತು ಕಾರ್ಯಕ್ಷಮತೆ ಹೊಸ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಲಿದೆ.ಭವಿಷ್ಯದ ಇಂಧನ ಎಂದೇ ಪರಿಗಣಿತವಾಗಿರುವ ಜಲಜನಕದಿಂದ ಚಾಲಿತವಾಗಿರುವ ಮಿರೈ (ಎಫ್ ಸಿ ಇ ವಿ) ವ್ಯವಸ್ಥೆಯನ್ನು ಪ್ರದರ್ಶನ ಮಾಡಲಾಗುತ್ತಿದೆ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಸಬ್-ಸಿಸ್ಟಮ್ ಅನಾವರಣಗೊಳಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಕಂಟ್ರಿ ಹೆಡ್ ಶ್ರೀ ವಿಕ್ರಮ್ ಗುಲಾಟಿ ಅವರು, ‘ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವು ವಿದ್ಯುತ್, ಸಾರಿಗೆ ಮತ್ತು ತಂತ್ರಜ್ಞಾನ ಸಂಸ್ಥೆಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂಗಾಲದ ಹೊರಸೂಸುವಿಕೆ, ನೀರಿನ ಕೊರತೆ ಮತ್ತು ಜೀವ ವೈವಿಧ್ಯತೆ ನಷ್ಟದಂತಹ ಅನೇಕ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಮಗ್ರ ಪರಿಸರ ನಿರ್ವಹಣಾ ಕ್ರಮದ ಅನ್ವೇಷಣೆ ಮಾಡುವ ನಿಟ್ಟಿನಲ್ಲಿ 2015ರಲ್ಲಿ ಟೊಯೋಟಾ ಗ್ಲೋಬಲ್ ಎನ್ವಿರಾನ್ಮೆಂಟಲ್ ಚಾಲೆಂಜ್ 2050 (ಟಿಇಸಿ 2050) ಅನ್ನು ಘೋಷಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ’ ಎಂದು ಅವರು ಹೇಳಿದರು.