ಎಲ್ಲವೂ ಯಾವುದರಿಂದ ಪ್ರಕಟವಾಗಿದೆಯೋ, ಯಾವುದರಲ್ಲಿ ಎಲ್ಲವೂ ಸಂರಕ್ಷಿಸಲ್ಪಡುತ್ತದೋ ಮತ್ತು ಯಾವುದರಲ್ಲಿ ಎಲ್ಲವೂ ಅಂತಿಮವಾಗಿ ಲಯವಾಗುತ್ತದೋ, ಆ ತತ್ವವೇ ಶಿವ. ಯಾವ ಸಮಯದಲ್ಲೂ, ಯಾರಿಂದಲೂ ಅವನನ್ನು ಬಿಟ್ಟು ಹೊರಗೆ ಹೋಗಲಾರದಂತಹ ಆಕಾಶ ಮತ್ತು ಚೈತನ್ಯವೇ ಶಿವ.
-ಗುರುದೇವ್ ಶ್ರೀ ಶ್ರೀ ರವಿ ಶಂಕರ್, ಆರ್ಟ್ ಆಫ್ ಲಿವಿಂಗ್.
ಯಾರೋ ನಮ್ಮನ್ನು ‘ಶಿವನೆಂದರೆ ಯಾರು?’ ಎಂದು ಕೇಳಿದರು. ಅದಕ್ಕೆ ಪ್ರತಿಯಾಗಿ ನಾವು, ‘ಯಾವುದೆಲ್ಲ ಶಿವನಲ್ಲ?’ ಎಂದು ಪ್ರಶ್ನಿಸಿದೆವು. ಶಿವನೆಂದರೆ ಒಂದು ‘ಶರೀರ’ವೇ? ಅವನೊಂದು ರೂಪವೇ? ಅವನು ಮೇಲೆಲ್ಲೋ ಕುಳಿತಿರುವವನೇ?ಇಲ್ಲ. ಅವೆಲ್ಲವೂ ಕೇವಲ ಕಟ್ಟುಕತೆಗಳು.
ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ಯೋಗಿಯೇ ಶಿವನೆಂಬ ಒಂದು ದಂತಕಥೆ. ಶಿವನಿಗೆ ದೇಹವಿಲ್ಲ. ಅವನೊಬ್ಬ ವ್ಯಕ್ತಿಯೇ ಅಲ್ಲ. ಅಗ್ರಾಹ್ಯವಾದ, ಅನಂತವಾದ ದೈವವನ್ನು ಒಂದು ಪ್ರತೀಕವಾಗಿ ತೋರಿಸಲು, ಆ ದೈವವು ಎಲ್ಲರಿಗೂ ಅರ್ಥವಾಗಲೆಂದು ನಮ್ಮ ಪ್ರಾಚೀನ ಋಷಿಗಳು ಒಂದು ರೂಪವನ್ನು ಸೃಷ್ಟಿಸಿದರು. ನಿಜವಾಗಿ ಶಿವನಿಗೆ ರೂಪವೇ ಇಲ್ಲ; ಅವನೆಂದಿಗೂ ಜನಿಸಿದವನಲ್ಲ ಮತ್ತು ಅವನಿಗೆ ಯಾವ ಗುಣಲಕ್ಷಣಗಳೂ ಇಲ್ಲ. ಅವನು ಪ್ರಜ್ಞೆಯ ಆ ಚಿದಾಕಾಶವಲ್ಲದೆ ಬೇರೇನೂ ಅಲ್ಲ.
ಎಲ್ಲವೂ ಯಾವುದರಿಂದ ಪ್ರಕಟವಾಗಿದೆಯೋ, ಯಾವುದರಲ್ಲಿ ಎಲ್ಲವೂ ಸಂರಕ್ಷಿಸಲ್ಪಡುತ್ತದೋ ಮತ್ತು ಯಾವುದರಲ್ಲಿ ಎಲ್ಲವೂ ಅಂತಿಮವಾಗಿ ಲಯವಾಗುತ್ತದೋ, ಆ ತತ್ವವೇ ಶಿವ. ಯಾವ ಸಮಯದಲ್ಲೂ, ಯಾರಿಂದಲೂ ಅವನನ್ನು ಬಿಟ್ಟು ಹೊರಗೆ ಹೋಗಲಾರದಂತಹ ಆಕಾಶ ಮತ್ತು ಚೈತನ್ಯವೇ ಶಿವ. ಏಕೆಂದರೆ ಇಡೀ ಸೃಷ್ಟಿಯ ಸಾರವೇ ಅವನು. ಅವನ ದೇಹವನ್ನು ನೀಲಿ ಬಣ್ಣವಾಗಿ ಚಿತ್ರಿಸಲಾಗಿರುವ ಕಾರಣವೆಂದರೆ, ನೀಲಿ ಬಣ್ಣವು ಆಕಾಶವನ್ನು ಸೂಚಿಸುತ್ತದೆ; ಯಾವ ಆಕಾರವನ್ನೂ, ಯಾವ ರೂಪವನ್ನೂ ಹೊಂದದೆ ಇರುವಂತಹ ಸರ್ವವ್ಯಾಪಿಯಾದ ಅನಂತತೆಯನ್ನು ಅದು ಸೂಚಿಸುತ್ತದೆ.
ಕೈಲಾಸ ಕೂಡಾ ಹಾಗೆಯೇ, ಅದು ಶಿವನು ಜೀವಿಸಿದ್ದಂತಹ ಕೇವಲ ಒಂದು ಪರ್ವತವಲ್ಲ. ಕೈಲಾಸ ಎಂದರೆ ಎಲ್ಲಿ ಕೇವಲ ಆನಂದ, ಸಂಭ್ರಮ ಇರುವುದೋ ಆ ಸ್ಥಳ. ನಿಮ್ಮಲ್ಲಿ ಶಿವತತ್ವವು ಉದಯಿಸಿದಾಗ, ನಿಮ್ಮ ಜೀವನದಲ್ಲಿ ಕೇವಲ ಆನಂದ, ಸಂಭ್ರಮವಿರುತ್ತದೆ. ಅದೇ ಕೈಲಾಸ.
ಶಿವನ ಪಂಚಮುಖಗಳ ಬಗೆಗಿನ ವಾಸ್ತವಿಕತೆ:
ವಾಸ್ತವದಲ್ಲಿ ಶಿವನಿಗೆ ಮುಖವಿಲ್ಲ, ಆದರೆ ಅಗ್ನಿ, ಜಲ, ವಾಯು, ಪೃಥ್ವಿ ಮತ್ತು ಆಕಾಶಗಳೆಂಬ ಪಂಚಭೂತಗಳ ಮೂಲಕ ಅವನಲ್ಲಿ ಪಂಚ ಅಂಶಗಳಿವೆ. ಪ್ರತಿಯೊಂದು ಭೂತದ ಅಧಿಪತಿಗೆ ಒಂದು ಸುಂದರವಾದ ಹೆಸರನ್ನು ಕೊಡಲಾಗಿದೆ. ಉದಾಹರಣೆಗೆ, ‘ಸದ್ಯೋಜಾತ’ ಎಂದರೆ ‘ಪ್ರತೀ ಕ್ಷಣವೂ ಜನಿಸಿರುವ, ನವೀನವಾದ, ಹೊಸತಾದ’. ‘ವಾಮದೇವ’ ಎಂದರೆ, ‘ಅತೀ ಸುಂದರ’. ‘ಅಘೋರ’ ಎಂದರೆ ಭಯವೇ ಇಲ್ಲದಂತಹ; ಬೆರಗುಗೊಳಿಸುವಂತಹ ಸೌಂದರ್ಯವನ್ನು ಚಿತ್ರಿಸುವುದು. ಶಿವನನ್ನು ‘ವಿರೂಪಾಕ್ಷ’ ಎಂದೂ ಕರೆಯಲಾಗುತ್ತದೆ; ಎಂದರೆ, ‘ಕಣ್ಣಿಲ್ಲದಂತಹ ಕಣ್ಣು’. ನಿಮ್ಮ ಕಣ್ಣುಗಳನ್ನು ಮುಚ್ಚಿದರೆ ಯಾವ ಪಂಚೇಂದ್ರಿಯಗಳ ಸಹಾಯವೂ ಇಲ್ಲದೆಯೇ ನೀವು ನೋಡಬಲ್ಲಿರಿ ಮತ್ತು ತಿಳಿಯಬಲ್ಲಿರಿ. ಚೈತನ್ಯದ ಈ ಅಂಶವೇ ವಿರೂಪಾಕ್ಷ. ಅವನು ‘ತತ್ ಪುರುಷ’; ದೇಹವೆಂಬ ನಗರಿಯಲ್ಲಿರುವ ಆತ್ಮ. ನಮ್ಮ ದೇಹವು ಒಂದು ನಗರದಂತೆ; ಅದು ಅದ್ಭುತವಾದ ವಿನ್ಯಾಸವನ್ನು ಮತ್ತು ಸರಬರಾಜು ವ್ಯವಸ್ಥೆಯನ್ನು ಮತ್ತು ಕೋಶಗಳ ಚಟುವಟಿಕೆಗಳನ್ನು ಹೊಂದಿದೆ. ಈ ಪುರದಲ್ಲಿ ವಾಸ ಮಾಡುವ ಆತ್ಮವೇ ಪುರುಷ.
ಜಾಗರಣೆಯ ರಹಸ್ಯ:
ಇಡೀ ರಾತ್ರಿ ಜಾಗರಣೆ ಮಾಡಬೇಕೆಂಬುದರ ಬಗೆಗಿನ ನಿಜಾಂಶ.
ಹಿಂದಿನ ಕಾಲದಲ್ಲಿ ತಾವು ನಿದ್ದೆಯ ಮೇಲೆ ಜಯವನ್ನು ಸಾಧಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಜನರು ಎಚ್ಚರವಾಗಿರುತ್ತಿದ್ದರು. ಆದರೆ ದೈಹಿಕವಾಗಿ ಎಚ್ಚೆತ್ತುಕೊಳ್ಳುವುದು ಕೇವಲ ಆರಂಭವಷ್ಟೇ. ಆಂತರ್ಯದ ಜಾಗೃತಿಯೇ ಶಿವರಾತ್ರಿ. ಇಂದು ಸಮಸ್ಯೆ ತದ್ವಿರುದ್ಧವಾಗಿದೆ. ತಾವು ನಿದ್ದೆ ಮಾಡಬಾರದೆಂಬ ನಂಬಿಕೆಯಿಂದ ಜನರು ಎಚ್ಚೆತ್ತುಕೊಂಡಿರುತ್ತಾರೆ ಮತ್ತು ಚಲನಚಿತ್ರಗಳನ್ನು ನೋಡುತ್ತಾ ಅಥವಾ ಚಿಂತಿಸುತ್ತಾ ಎಚ್ಚೆತ್ತುಕೊಂಡಿರುತ್ತಾರೆ. ಆದರೆ ನೀವು ಶಿವತತ್ವದಲ್ಲಿ ಮಿಂದಾಗ ನಿಮ್ಮ ಚೈತನ್ಯವು ಆಂತರ್ಯದಿಂದ ಎಚ್ಚೆತ್ತುಕೊಳ್ಳುತ್ತದೆ.
ಹಿಂದಿನ ಕಾಲದಲ್ಲಿ ಈ ಪದ್ಧತಿಗಳೆಲ್ಲವೂ ಪ್ರಕೃತಿಗೆ ಅನುಗುಣವಾಗಿಯೇ ಇದ್ದವು. ಈ ಸಮಯದಲ್ಲಿ ಬೀಜಗಳನ್ನು ಬಿತ್ತುವ ಅಥವಾ ಫಸಲನ್ನು ಕಟಾವು ಮಾಡುವ ಕೆಲಸ ಇಲ್ಲದೆ ಇದ್ದಿದ್ದರಿಂದ ರೈತರು ರಾತ್ರಿಯಿಡೀ ಜಾಗರಣೆ ಮಾಡುತ್ತಿದ್ದರು. ಇಂದು ಸಾಮಾನ್ಯವಾಗಿ, ಇಡೀ ರಾತ್ರಿ ಎಚ್ಚೆತ್ತುಕೊಂಡು, ಅದರ ಮಾರನೆಯ ದಿವಸ ಮಲಗದೆ ಇರಲು ಬೇಕಾದಷ್ಟು ಶಕ್ತಿ ನಮ್ಮ ದೇಹಗಳಲ್ಲಿಲ್ಲ. ನಿಮ್ಮದೇ ಆತ್ಮದ ಬೆಳಕಿಗೆ ನೀವು ಯಾವುದೇ ದಿವಸ ಎಚ್ಚೆತ್ತುಕೊಂಡರೂ, ಅಂದಿನ ದಿನವೇ ಶಿವರಾತ್ರಿ ಆಗುತ್ತದೆ. ದೇಹವೆಂಬ ಪುರದಲ್ಲಿ ವಾಸಿಸುತ್ತಿರುವ ಆತ್ಮವು ಅರಳಿ, ತನ್ನ ಅನಂತವಾದ ಸ್ವಭಾವವನ್ನು ಗುರುತಿಸುವುದೇ ನಿಜವಾದ ಜಾಗೃತಿ.
ಧ್ಯಾನದಲ್ಲಿ ಮಿಂದೇಳಿ:
ಶಿವರಾತ್ರಿಯೆಂದರೆ ದಿವ್ಯ ಪ್ರಜ್ಞೆಗೆ ಶರಣಾಗುವುದು, ದಿವ್ಯ ಶಿವತತ್ವದಲ್ಲಿ ವಿಶ್ರಮಿಸುವುದು. ಫೆಬ್ರವರಿ 15, 2026 ರಂದು ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಧ್ಯಾನ ಮತ್ತು ಭಕ್ತಿಯ ಅಲೆಯಲ್ಲಿ ಮಿಂದೇಳಲು ಮಹಾಶಿವರಾತ್ರಿಯ ಮಹೋತ್ಸವದಲ್ಲಿ ಪಾಲ್ಗೊಳ್ಳಿ.
