ಬಿಸಿನೆಸ್ ಐಡಿಯಾ ಹುಡುಕುವುದು ಹೇಗೆ  ! ಹಣ  ದುಡಿಯುವ  ಉಪಾಯಗಳು . ಬಿಸಿನೆಸ್ ಐಡಿಯಾ ಹುಡುಕುವುದು ಹೇಗೆ ಎಂಬ ಪ್ರಶ್ನೆ ಹಲವಲ್ಲಿರುತ್ತದೆ.  ಆ ಪ್ರಶ್ನೆಗೆ ಉತ್ತರ ಇಲ್ಲಿ ಸಿಗಬಹುದು.

ಅವಳೊಬ್ಬಳು ಗೃಹಿಣಿ. ಗಂಡ, ಮಗ ಮತ್ತು ಸಂಸಾರ ಎಂದು ತನ್ನ ಪಾಡಿಗೆ ತಾನಿದ್ದವರು. ಅದು ಕೋವಿಡ್‌ ಸಮಯ. ಆಕೆಯ 4 ವರ್ಷದ ಮಗನಿಗೆ ಪದೇ ಪದೇ ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿತ್ತು. ಆಗ ಆಕೆ ಅಜ್ಜಿ ತನಗೆ ಚಿಕ್ಕವಳಿದ್ದಾಗ ಕೊಡುತ್ತಿದ್ದ ಕಷಾಯವನ್ನು ಮಗನಿಗೆ ಮಾಡಿಕೊಟ್ಟರು. ಮಗ ಚೇತರಿಸಿಕೊಂಡ.

ತನ್ನ ಅಪಾರ್ಟ್‌ಮೆಂಟ್‌ನವರೊಂದಿಗೆ ಈ ವಿಷಯ ಹಂಚಿಕೊಂಡರು. ಅವರಲ್ಲಿ ಕೆಲವರು ತಮಗೂ ಮಾಡಿಕೊಡಲು ಹೇಳಿದರು. ಅವರಿಗೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ಆಕೆಗೆ ಇದನ್ನೇ ಬಿಸಿನೆಸ್‌ ಮಾಡುವ ಐಡಿಯಾ ಬಂತು. ಶುರುವಿಗೆ ಯಾರೂ ಖರೀದಿಗೆ ಮುಂದಾಗಲಿಲ್ಲ. ಆನ್‌ಲೈನ್‌ ಬಿಸಿನೆಸ್‌ ಶುರು ಮಾಡಿದರು. ಕ್ರಮೇಣ ಉದ್ಯಮ ಕಚ್ಚಿಕೊಂಡಿತು. ಇವತ್ತು ಈ ಹೆಣ್ಮಗಳ ಬಿಸಿನೆಸ್‌ ನೆಟ್‌ವರ್ಥ್‌ ಸುಮಾರು 300 ಕೋಟಿ ರು.ಗಳಿಗೂ ಅಧಿಕ.

ಅಲ್ಲಿಗೆ ಸಮಸ್ಯೆಯೊಂದು ಬಿಸಿನೆಸ್‌ ಐಡಿಯಾ ಆಗುವ ಜೊತೆಗೆ ಸಾಮಾನ್ಯ ಗೃಹಿಣಿಯೊಬ್ಬಳನ್ನು ಬಿಸಿನೆಸ್‌ ಐಕಾನ್‌ ಆಗಿಯೂ ಮಾಡಿದೆ.

*

ಸಿಂಗಲ್‌ ಬೆಡ್‌ರೂಂ ಮನೆಯಲ್ಲಿ ಎರಡೆರಡು ಕುಟುಂಬಗಳು ಒಟ್ಟೊಟ್ಟಿಗೆ ಬದುಕುತ್ತಿದ್ದವು. ಮನೆಯವರೆಲ್ಲ ಬೆಳಗ್ಗೆ 5 ಗಂಟೆಗೆ ಏಳಲೇ ಬೇಕಿತ್ತು. ಇಲ್ಲವಾದರೆ ಬಾತ್‌ರೂಂ ಸಿಗಲ್ಲ ಅನ್ನುವ ಸ್ಥಿತಿ. ಅಂಥಾ ಮನೆಯಲ್ಲಿ ಬಡತನದಲ್ಲಿ ಬೆಳೆದ ಹುಡುಗ ಆತ. ಅಸ್ತಮಾ ಸಮಸ್ಯೆಯೂ ಇನ್ನಿಲ್ಲದ ಹಾಗೆ ಅವನನ್ನು ಬಾಧಿಸುತ್ತಿತ್ತು. ಉಬ್ಬಸ ಸಮಸ್ಯೆ, ಆರ್ಥಿಕ ಮುಗ್ಗಟ್ಟಿನ ಜೊತೆಗೆ ಬೆಳೆದ ಹುಡುಗನ ಡಾಕ್ಟರ್‌ ಆಗುವ ಕನಸಿಗೂ ಹಣ ಮುಗ್ಗಟ್ಟು ತಣ್ಣೀರೆರಚಿತು.

ಬದುಕಿನ ಒಂದು ಹಂತದಲ್ಲಿ ಈತನಿಗೆ ಯೋಗ, ಪ್ರಾಣಾಯಾಮದ ಅಭ್ಯಾಸ ಸಿಕ್ಕಿತು. ಬೆಳಗ್ಗೆ 5 ಗಂಟೆಗೆ ಏಳುವುದು ಇದಕ್ಕೆ ಪೂರಕವಾಯಿತು. ಈ ಅಭ್ಯಾಸದಿಂದ ಅಸ್ತಮಾ ಸಮಸ್ಯೆ ಗುಣವಾಗುತ್ತ ಬಂತು.

ತನ್ನ ಸಮಸ್ಯೆಗೆ ಪರಿಹಾರ ನೀಡಿದ ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸಕ್ಕೆ ಆಧುನಿಕ ಎಕ್ಸರ್‌ಸೈಸ್‌ಗಳನ್ನೂ ಜೋಡಿಸಿ ಜನಪ್ರಿಯ ವೆಲ್‌ನೆಸ್‌ ಪ್ರಾಕ್ಟೀಸ್‌ ಅನ್ನು ರೂಪಿಸುತ್ತಾರೆ. ಇದೀಗ ಕೋಟ್ಯಂತರ ಜನ ನಿತ್ಯ ಇವರ ಆನ್‌ಲೈನ್‌ ಯೋಗ ವೆಲ್‌ನೆಸ್‌ ತರಗತಿಗೆ ಹಾಜರಾಗುತ್ತಿದ್ದಾರೆ. ಸಿಂಗಲ್‌ ಬೆಡ್‌ರೂಂ ಮನೆಯಲ್ಲಿ 11 ಜನರೊಂದಿಗಿದ್ದ ಇವರು ಇಂದು 50 ಕೋಟಿ ರು.ಗಳ ಒಡೆಯ.

ಸಮಸ್ಯೆ ಎಂದರೆ ಹೆದರಿ ಓಡುವವರ ಮುಂದೆ ಇಂಥಾ ಐಕಾನ್‌ಗಳು ನಮಗೆ ಸಮಸ್ಯೆಯಿಂದಲೇ ಬಿಸಿನೆಸ್‌ ಸೃಷ್ಟಿ ಮಾಡುವುದಕ್ಕೆ ಪ್ರೇರಣೆಯಾಗುತ್ತಾರೆ.

*

1. ಸಮಸ್ಯೆಗೆ ಪರಿಹಾರವೇ ಉದ್ಯಮ

ದಿನನಿತ್ಯದ ಬದುಕಿನಲ್ಲಿ ನೀವು ಎದುರಿಸುವ ಸಮಸ್ಯೆಗೆ ಸಿಗುವ ಪರಿಹಾರವೇ ದೊಡ್ಡ ಬಿಸಿನೆಸ್ ಐಡಿಯಾ ಆಗಬಹುದು.

2. ಸೋಶಿಯಲ್ ಮೀಡಿಯಾದ ಶಕ್ತಿ

ಬಿಸಿನೆಸ್ ಬೆಳೆಸಲು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೂಲಕ ಜನರನ್ನು ತಲುಪಬಹುದು. ಮೇಲೆ ಹೇಳಿದ ಎರಡೂ ಉದಾಹರಣೆಗಳ ಬೆಳವಣಿಗೆಗೆ ಸೋಷಲ್‌ ಮೀಡಿಯಾದ ಕೊಡುಗೆಯೂ ಅಪಾರ.

3. ಪಾರದರ್ಶಕತೆ ಮತ್ತು ಗುಣಮಟ್ಟ

ಗ್ರಾಹಕರಿಗೆ ನೀವು ಏನು ನೀಡುತ್ತಿದ್ದೀರಿ ಎಂಬ ಸತ್ಯವನ್ನು ತೆರೆದಿಟ್ಟರೆ ನಂಬಿಕೆ ತಾನಾಗಿಯೇ ಬರುತ್ತದೆ.

4. ಸಣ್ಣದಾಗಿ ಶುರು ಮಾಡಲು ಹಿಂಜರಿಯಬೇಡಿ

ಅಡುಗೆಮನೆಯಿಂದ ಶುರುವಾದ ಸಣ್ಣ ಕೆಲಸವೂ ಜಾಗತಿಕ ಬ್ರಾಂಡ್ ಆಗಬಲ್ಲದು. ಆ ನಿಟ್ಟಿನಲ್ಲಿ ಮುಂದುವರಿಯಿರಿ.

5. ಗ್ರಾಹಕರ ಪ್ರತಿಕ್ರಿಯೆಗೆ ತಕ್ಷಣದ ಸ್ಪಂದನೆ

ಶುರುವಿಗೆ ಗ್ರಾಹಕರು ನೀಡುವ ಸಣ್ಣಪುಟ್ಟ ಸಲಹೆ ಅಥವಾ ದೂರುಗಳನ್ನು ಉದ್ಯಮದ ಬೆಳವಣಿಗೆಗೆ ಏಣಿಯನ್ನಾಗಿ ಮಾಡಿಕೊಳ್ಳಬೇಕು.

6. ಸತತ ಪ್ರಯತ್ನ ಮತ್ತು ತಾಳ್ಮೆ

ಆರಂಭದ ಕೆಲವು ತಿಂಗಳುಗಳು ಅಥವಾ ವರ್ಷಗಳ ಕಾಲ ಮಾರಾಟ ಕಡಿಮೆಯಿದ್ದರೂ, ಲಾಭ ಬರದಿದ್ದರೂ ಧೃತಿಗೆಡಬಾರದು. ಬ್ರಾಂಡ್‌ ಮೇಲಿನ ನಂಬಿಕೆಯನ್ನು ಬೆಳೆಸುತ್ತ ಹೋಗಬೇಕು.