ಬಳ್ಳಾರಿ: ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಬಳ್ಳಾರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಎಸ್‌ಬಿಐ ಪ್ರಧಾನ ಕಚೇರಿ ಎದುರು ಸಮಾವೇಶಗೊಂಡ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರ ಕೂಡಲೇ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕಾರ್ಮಿಕ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಬ್ಯಾಂಕ್ ವಲಯ ಖಾಸಗೀಕರಣ ನಿಲ್ಲಿಸಬೇಕು ಎಂದು ಘೋಷಣೆ ಕೂಗಿದರು.
ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಬ್ಯಾಂಕ್ ನೌಕರರ ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಬ್ಯಾಂಕ್ ಠೇವಣೆ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರನ್ಸ್ ನಂತ ಸೇವೆಗಳಿಗೆ ಸಮಸ್ಯೆಯಾಗಿತ್ತು. ಎಟಿಎಂ ಲಭ್ಯತೆಯಲ್ಲೂ ವ್ಯತ್ಯಯವಾಗಿತ್ತು. ಖಾಸಗಿ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ಎಕ್ಸಿಸ್ ಸೇರಿದಂತೆ ಇತರೆ ಖಾಸಗಿ ಬ್ಯಾಂಕ್ ವಹಿವಾಟು ಎಂದಿನಂತೆ ಇತ್ತು.ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನ ಸೂರಜ್, ಧರ್ಮೇಂದ್ರ, ರಾಮಕೃಷ್ಣ ದೇವರ್ ಸೇರಿದಂತೆ ಸಂಘಟನೆಯ ಜಿಲ್ಲಾ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.