ಹಾವೇರಿ:ದಾಸಶ್ರೇಷ್ಠ ಕನಕದಾಸರ ಹರಿಭಕ್ತ ಸಾರದ ಕಾವ್ಯವನ್ನು ಗಮಕ ಸಂಗೀತದ ಮೂಲಕ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆಯ ಕನಕ ಕಲಾ ಭವನದಲ್ಲಿ ಜ. 29ರಂದು ಬೆಳಗ್ಗೆ 10ಕ್ಕೆ ರಾಜ್ಯ ಮಟ್ಟದ ಕನಕ ಕಾವ್ಯ ಗಮಕ ಕಲೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಎಂ.ಖಾಸೀಮ್ ಮಲ್ಲಿಗೆಮಡುವು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಗಮಕ ಸಾಹಿತ್ಯದ ಕಲೆಗಳು ನಶಿಸಿ ಹೋಗುತ್ತಿವೆ. ಕನಕದಾಸ, ಕುಮಾರವ್ಯಾಸ, ಲಕ್ಷ್ಮಿಶ, ರಾಘವಾಂಕ ಹೀಗೆ ಅನೇಕ ಕವಿಗಳ ಗಮಕ ಸಾಹಿತ್ಯ ಅಳಿವಿನಂಚಿನಲ್ಲಿದೆ. ಇಂತಹ ನಶಿಸುತ್ತಿರುವ ಗಮಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಇಂದಿನ ಪೀಳಿಗೆಗೂ ಗಮಕ ಸಾಹಿತ್ಯ ಪರಿಚಯಿಸುವ ಕೆಲಸವನ್ನು ಮಾಡಬೇಕಿದೆ. ಹಾಗಾಗಿ ಜ. 29ರಂದು ಕಾಗಿನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯ ಮಟ್ಟದ ಕನಕ ಕಾವ್ಯ ಗಮಕ ಕಲೋತ್ಸವವನ್ನು ಆಯೋಜಿಸಲಾಗಿದೆ ಎಂದರು.ಕಲೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಉದ್ಘಾಟನೆ ನೆರವೇರಿಸಲಿದ್ದು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಗಿನೆಲೆ ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಗೇನಣ್ಣನವರ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ದಿಲೀಪ ಕಲ್ಲೇರ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟಾçರ್ ಎನ್.ನರೇಂದ್ರಬಾಬು ಘನ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.200 ವಿದ್ಯಾರ್ಥಿಗಳು ಭಾಗಿ: ಹರಿಭಕ್ತಸಾರ ಕಾವ್ಯದ ಗಮಕ ವಾಚನಗಳನ್ನು ರಾಜ್ಯದ ಏಳು ಜಿಲ್ಲೆಗಳಿಂದ ವಿವಿಧ ಸಂಗೀತ ಶಾಲೆಗಳ ಸುಮಾರು 200 ಜನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಧಾರವಾಡದ ಸ್ವರಾಂಜಲಿ ಸಂಗೀತ ವಿದ್ಯಾಲಯ, ದಾವಣಗೆರೆಯ ನಿನಾದ ಗಮಕ ಮತ್ತು ಸಂಗೀತ ಶಾಲೆ, ವಿಜಯನಗರದ ಶ್ರೀನಿಕಾ ಕಲಾಸ್ವರ ಸಂಸ್ಥೆ, ಚಿತ್ರದುರ್ಗದ ಶ್ರೀ ಶಾರದಾ ಸಂಗೀತ ಕಲಾಕೇಂದ್ರ, ಚಿಕ್ಕಮಗಳೂರಿನ ಅಮೃತವರ್ಷಿಣಿ ಸಂಗೀತ ಶಾಲೆ, ಹಾಸನದ ಕುಶಲವ ಗಮಕ ಕಲಾಶಾಲೆ ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ಕನಕ ಕಾವ್ಯಾಂತ್ಯಾಕ್ಷರಿ ವಿಶೇಷ ಕಾರ್ಯಕ್ರಮ ಜರುಗಲಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ಆಸಕ್ತರು ಗಮಕ ಸಾಹಿತ್ಯದ ಕಲೆಯನ್ನು ಆನಂದಿಸಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಜಗನ್ನಾಥ ಗೇನಣ್ಣನವರ, ದಿಲೀಪ ಕಲ್ಲೇರ ಇದ್ದರು.