ಬ್ಯಾಂಕ್‌ ಮೆನೇಜರ್‌ರ ಸಕಾಲಿಕ ಎಚ್ಚರಿಕೆಯಿಂದ ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಗ್ರಾಹಕಿ ಪಾರು

KannadaprabhaNewsNetwork | Published : Jan 17, 2025 12:47 AM

ಸಾರಾಂಶ

ಬ್ರಾಂಚ್ ಮೆನೇಜರ್ ಅವರು ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತ್ತು. ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್ ಬ್ರಾಂಚ್‌ನ್ನು ಸಂಪರ್ಕಿಸಿದರು. ಪೊಲೀಸರು ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯ ಮೆನೇಜರ್ ಅವರ ಸಕಾಲಿಕ ಎಚ್ಚರಿಕೆಯಿಂದ ಹಿರಿಯ ವೃದ್ಧೆಯೊಬ್ಬರು ‘ಡಿಜಿಟಲ್ ಅರೆಸ್ಟ್’ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ 1.35 ಕೋಟಿ ರು. ರಕ್ಷಣೆಯಾಗಿದೆ. ಬ್ಯಾಂಕಿನ ಹಿರಿಯ ಗ್ರಾಹಕಿಯೊಬ್ಬರು ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯಲ್ಲಿ 1.35 ಕೋಟಿ ರು. ಫಿಕ್ಸೆಡ್ ಡಿಪಾಸಿಟ್ ಇರಿಸಿದ್ದರು. ಈ ಮೊತ್ತವನ್ನು ತನಗೆ ತಕ್ಷಣವೇ ನೀಡುವಂತೆ ಗ್ರಾಹಕರು ಕೋರಿದ್ದರು. ಗ್ರಾಹಕರು ಬಹಳ ಆತಂಕದಿಂದ ಇರುವುದನ್ನು ಕಂಡ ಶಾಖೆಯ ಮೆನೇಜರ್ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು. ಗ್ರಾಹಕರು ಯಾರೊಂದಿಗೋ ಆಗಾಗ ಕರೆಯಲ್ಲಿ ನಿರತರಾಗಿದ್ದನ್ನು ಗಮನಿಸಿದ ಹಾಗೂ ಆಗಾಗ್ಗೆ ಪಾವತಿಯ ಪ್ರಗತಿಯ ಬಗ್ಗೆ ಅಪ್‌ಡೇಟ್‌ ಮಾಡುತ್ತಿದ್ದುದನ್ನು ಗಮನಿಸಿದ ಮೆನೇಜರ್ ಅವರಿಗೆ ಅದು ಸೈಬರ್ ವಂಚನೆ (ಡಿಜಿಟಲ್ ಅರೆಸ್ಟ್) ಎಂಬ ಅನುಮಾನ ಬಂದಿತ್ತು. ಈ ಬಗ್ಗೆ ಬ್ರಾಂಚ್ ಮೆನೇಜರ್ ಅವರು ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತ್ತು. ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್ ಬ್ರಾಂಚ್‌ನ್ನು ಸಂಪರ್ಕಿಸಿದರು. ಪೊಲೀಸರು ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು.

ವಂಚಕರು ವೃದ್ಧೆ ಗ್ರಾಹಕಿಯನ್ನು ಪೊಲೀಸ್ ಅಧಿಕಾರಿಗಳು ಎಂದು ಹೇಳಿ ವಂಚಿಸಲು ಪ್ರಯತ್ನಿಸುತ್ತಿದ್ದರು. ಅವರು ಜಾರಿ ನಿರ್ದೇಶನಾಲಯ(ಇ.ಡಿ.)ದ ದಾಳಿಯಲ್ಲಿ ಅವರು ಈ ಗ್ರಾಹಕರಿಗೆ ಸೇರಿದ 300-400 ಡೆಬಿಟ್ ಕಾರ್ಡ್‌ಗಳು ಸಿಕ್ಕಿದ್ದು ಅದರಲ್ಲಿ ಒಂದು ಈ ಗ್ರಾಹಕಿಗೆ ಸೇರಿದೆ ಎಂದು ಹೇಳಿದ್ದರು. ಅವರು ಗ್ರಾಹಕಿಯ ಖಾತೆಯನ್ನು ಹಣ ವರ್ಗಾವಣೆಗೆ ಬಳಲಾಗುತ್ತಿದ್ದು ಅದನ್ನು ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ನಂತರ ವಂಚಕರು ಆರ್.ಬಿ.ಐ. ಖಾತೆ ಎಂದು ಹೇಳಿ ಅದಕ್ಕೆ ಹಣ ಕಳಿಸುವಂತೆ ಒತ್ತಾಯಿಸಿದರು. ಗ್ರಾಹಕಿಗೆ ಈ ವ್ಯವಹಾರದಲ್ಲಿ ಪಾಲಿಲ್ಲವಾದರೆ ಬಡ್ಡಿ ಸಮೇತ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ವಂಚಕರು ವಿಡಿಯೋ ಕಾಲ್‌ನಲ್ಲಿ ಪೊಲೀಸ್ ಅಧಿಕಾರಿಗಳಂತೆ ಬಟ್ಟೆ ಧರಿಸಿದ್ದರು ಮತ್ತು ಸುಳ್ಳು ಅರೆಸ್ಟ್ ವಾರೆಂಟ್ ಪ್ರದರ್ಶಿಸಿದ್ದರು. ಬ್ಯಾಂಕ್‌ ಮೆನೇಜರ್‌ರ ಸಕಾಲಿಕ ಎಚ್ಚರಿಕೆಯ ನಡವಳಿಕೆಯಿಂದಾಗಿ ಗ್ರಾಹಕರು ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಪಾರಾಗಿದ್ದಾರೆ.

Share this article