ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಇಂದು ಅಯೋಧ್ಯೆಯಲ್ಲಿ ಮಿನಿ ಇ-ಲಾಬಿಯೊಂದಿಗೆ ತನ್ನ ೯೧೫ ನೇ ಶಾಖೆಯನ್ನು ತೆರೆದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ನೂತನ ಶಾಖೆಯನ್ನು ಹಾಗೂ ಗೋಪಾಲ್ ನಾಗರಕಟ್ಟೆ ಅವರು ಮಿನಿ ಇ-ಲಾಬಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ದೀಪ ಬೆಳಗಿಸಿ ಮಾತನಾಡಿದ ಬ್ಯಾಂಕಿನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್, ಜಾಗತಿಕ ಭೂಪಟದಲ್ಲಿ ವಿರಾಜಮಾನವಾಗಿರುವ ಪವಿತ್ರ ನಗರವಾದ ಅಯೋಧ್ಯೆಗೆ ಕಾಲಿಡಲು ನಾವು ಸಂತೋಷಪಡುತ್ತೇವೆ. ಇದೀಗ ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ, ಅಯೋಧ್ಯೆಯು ಸಾಂಸ್ಕೃತಿಕ ಸಂರಕ್ಷಣೆಯ ಪರಿಪೂರ್ಣ ತಾಣವಾಗಿ ಹೊರಹೊಮ್ಮಿದೆ ಹಾಗೂ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ೧೦೦ ವರ್ಷಗಳ ವಿಶ್ವಾಸಾರ್ಹ ಹಾಗೂ ಗ್ರಾಹಕ ಸ್ನೇಹಿ ಪರಂಪರೆಯನ್ನು ಹೊಂದಿರುವ ಕರ್ಣಾಟಕ ಬ್ಯಾಂಕ್, ಅಯೋಧ್ಯೆಯ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ಉತ್ಕೃಷ್ಠ ಬ್ಯಾಂಕಿಂಗ್ ಸೇವೆಗಳನ್ನು ನೀಡಲಿದೆ ಎಂದರು.ಬ್ಯಾಂಕ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ಭಗವಾನ್ ಶ್ರೀರಾಮನ ಪವಿತ್ರ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಮ್ಮ ಬ್ಯಾಂಕಿನ ಹೊಸ ಶಾಖೆಯನ್ನು ಉದ್ಘಾಟಿಸಲು ನಾವು ಸಂತೋಷಪಡುತ್ತೇವೆ. ಈ ಮಹತ್ವದ ಸಂದರ್ಭ ಶ್ರೀರಾಮ ದೇವಾಲಯದ ಸನ್ನಿಹಿತ ಉದ್ಘಾಟನೆಯೊಂದಿಗೆ ಹೊಂದಿಕೆಯಾಗುತ್ತಿದೆ. ಇದು ಆರ್ಥಿಕ ಸಮೃದ್ಧಿ ಮತ್ತು ಸಮುದಾಯದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಸಂಕೇತಿಸುತ್ತದೆ. ನಮ್ಮ ಅಯೋಧ್ಯೆ ಶಾಖೆ ನವೀನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡಲಿದೆ. ಆ ಮೂಲಕ ಗ್ರಾಹಕರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಈ ಐತಿಹಾಸಿಕ ನಗರದ ಬೆಳವಣಿಗೆ ಮತ್ತು ಯೋಗ ಕ್ಷೇಮಕ್ಕೆ ಕೊಡುಗೆ ನೀಡಲು ನಾವು ಅಯೋಧ್ಯೆಯ ಜನರಿಗೆ ಸಮರ್ಪಣೆ, ಸಮಗ್ರತೆ ಮತ್ತು ವಿಶಾಲದೃಷ್ಟಿಯೊಂದಿಗೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಜಸ್ಟೀಸ್ ಎ.ವಿ. ಚಂದ್ರಶೇಖರ್, ದೆಹಲಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಬಸವರಾಜ ದೇಸಲ್ಲಿ, ಸಾರ್ವಜನಿಕ ಸಂಪರ್ಕಾಧಿಕಾರಿ ಮಾಧವ ವಿ.ಪಿ ಹಾಗೂ ಬ್ಯಾಂಕಿನ ಇನ್ನಿತರ ಉನ್ನತ ಅಧಿಕಾರಿಗಳು ಇದ್ದರು.