ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ತಗ್ಗಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ರೈತರು, ಸರ್ಕಾರ ಜಿಲ್ಲೆಯನ್ನು ಬರಗಾಲು ಎಂದು ಘೋಷಣೆ ಮಾಡಿದ್ದರೂ ರೈತರ ಮನೆಗಳಿಗೆ ನೋಟಿಸ್ ನೀಡಿ ಭಯ ಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ನಡುವೆ ಬ್ಯಾಂಕ್‌ನಿಂದ ಪಡೆದ ಸಾಲದ ಕಂತುಗಳನ್ನು ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ರೈತರು, ಶೈಕ್ಷಣಿಕವಾಗಿ ಪಡೆದ ಸಾಲವನ್ನು ಕಟ್ಟುವಂತೆ ವಿದ್ಯಾರ್ಥಿಗಳ ಪೋಷಕರಿಗೆ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿದರು.ಈ ವರ್ಷ ಸರಿಯಾಗಿ ಮಳೆಯಾಗದೇ ರೈತರು ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದ್ದರೂ ಇದಕ್ಕೆ ಕ್ಯಾರೆ ಎನ್ನದೇ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿ ರೈತರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಪಡೆದ ಶ್ರೀಮಂತರಿಗೆ ಯಾವುದೇ ನೋಟಿಸ್ ನೀಡಲ್ಲ. ಅವರ ಬಳಿ ಸಾಲವನ್ನು ಕೇಳಲ್ಲ. ಆದರೆ, ಸಾಮಾನ್ಯ ಜನರು, ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದೀರಿ. ನೋಟಿಸ್ ನೀಡಿದ್ದರಿಂದ ರೈತರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ, ಸಂಬಂಧಿಸಿದ ಸಚಿವರು, ವಿಪಕ್ಷ ನಾಯಕರು ತಕ್ಷಣ ರೈತರಿಗೆ ಸಾಲ ವಸೂಲಾತಿಗಾಗಿ ನೀಡುತ್ತಿರುವ ನೋಟಿಸ್‌ಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ರೈತರಿಂದ ಮನವಿ ಸ್ವೀಕರಿಸಿದ ಬ್ಯಾಂಕ್ ಮ್ಯಾನೇಜರ್ ಎನ್ .ರಮೇಶ್ ಮಾತನಾಡಿ, ಮೇಲಾಧಿಕಾರಿಗಳ ಸೂಚನೆಯಂತೆ ನಾವು ನೋಟಿಸ್ ನೀಡಿದ್ದೇವೆ. ಹೊಸ ಸಾಲ ಕಟ್ಟುವಂತೆ ಕೇಳುತ್ತಿಲ್ಲ. ಹಳೇ ಸಾಲ ನೀಡುವಂತೆ ಈ ಹಿಂದೆಯೂ ನೋಟಿಸ್ ನೀಡಲಾಗಿತ್ತು. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.