)
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಿರಣ್, ತನ್ನ ಕುಟುಂಬದ ಜತೆ ವಿದ್ಯಾರಣ್ಯಪುರ ಹತ್ತಿರದ ಎಂ.ಎಸ್. ಪಾಳ್ಯದಲ್ಲಿ ನೆಲೆಸಿದ್ದ. 2019ರಿಂದ ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಆತ, ಪ್ರಸ್ತುತ ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆನ್‌ಲೈನ್ ಬೆಟ್ಟಿಂಗ್ ವ್ಯಸನಕ್ಕೆ ಬಿದ್ದಿದ್ದ ಆತ ಕಳ್ಳರಿಂದ ಸುರಕ್ಷಿತವಾಗಿರಲೆಂದು ತನ್ನ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನಕ್ಕೇ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ.ಕಳೆದ ನವೆಂಬರ್-ಜನವರಿ ಅಂತ್ಯದವರೆಗೆ ಬ್ಯಾಂಕ್ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ 4.12 ಕೋಟಿ ರು. ಮೌಲ್ಯದ 2.783 ಗ್ರಾಂ. ಚಿನ್ನಾಭರಣಗಳನ್ನು ಹಂತ-ಹಂತವಾಗಿ ಕಿರಣ್ ಕಳವು ಮಾಡಿದ್ದ. ಈ ಆಭರಣಗಳನ್ನು ಬೇರೆ ಬೇರೆ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟು ಸುಮಾರು 2.5 ಕೋಟಿ ರು. ಪಡೆದಿದ್ದ. ಈ ಹಣದಲ್ಲಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಜೂಜಾಡಿದ್ದ. ಈವರೆಗೆ ಬೆಟ್ಟಿಂಗ್‌ನಲ್ಲಿ ಆತ 5 ಕೋಟಿ ರು. ಕಳೆದಿದ್ದಾನೆ ಎನ್ನಲಾಗಿದೆ.
ಮೊದಲು ತನ್ನ ವೇತನ, ನಂತರ ಕುಟುಂಬದವರ ಆಭರಣ, ಸ್ನೇಹಿತರಿಂದ ಸಾಲ ಮಾಡಿ ಲಕ್ಷ ಲಕ್ಷ ಹಣ ಪಣಕ್ಕಿಟ್ಟು ಜೂಜಾಡಿ ಕೈ ಸುಟ್ಟುಕೊಂಡಿದ್ದ. ಇಷ್ಟಾದರೂ ಬುದ್ಧಿ ಕಲಿಯದ ಆತ ಕೊನೆಗೆ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಗ್ರಾಹಕರ ಬಂಗಾರವನ್ನೇ ಕದ್ದು ಜೂಜಾಡಿ ಕಿರಣ್ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸೆರೆಯಾಗಿದ್ದು ಹೇಗೆ?ಕಳೆದ ವರ್ಷ ಜೂನ್‌ನಿಂದ ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ ಕಿರಣ್ ಬಳಿ ಬ್ಯಾಂಕ್ ಲಾಕರ್‌ಗಳ ಕೀಗಳಿದ್ದವು. ಗ್ರಾಹಕರ ಲಾಕರ್ ತೆಗೆಯುವ ಅಧಿಕಾರ ಸಹ ಆತನಿಗೆ ಇತ್ತು. ಹಣದ ಅವಶ್ಯಕತೆ ಬಿದ್ದಾಗಲೆಲ್ಲ ಗ್ರಾಹಕರ ಲಾಕರ್ ಬೀಗ ತೆಗೆದು ಚಿನ್ನ ಕಳವು ಮಾಡುತ್ತಿದ್ದ. ಇದಕ್ಕಾಗಿ ಬೆಳಗ್ಗೆ ಕಚೇರಿಗೆ ಬೇಗ ಬಂದು ಅಥವಾ ಸಂಜೆ ನೌಕರರು ಹೊರಟ ಬಳಿಕ ಕೈಚಳಕ ತೋರಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿ ತಪ್ಪೊಪ್ಪಿಗೆಬ್ಯಾಂಕ್‌ನಲ್ಲಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿದ್ದ ಗ್ರಾಹಕಿಯೊಬ್ಬರು, ಫೆ.2 ರಂದು ಸಾಲ ಮರುಪಾವತಿಸಿ ಆಭರಣ ಮರಳಿ ಪಡೆಯಲು ಬಂದಿದ್ದರು. ಆಗ ವ್ಯವಸ್ಥಾಪಕರು ಲಾಕರ್ ತೆರೆದು ಗ್ರಾಹಕಿಗೆ ಆಭರಣದ ಲೆಕ್ಕ ಒಪ್ಪಿಸುತ್ತಿದ್ದರು. ಆ ವೇಳೆ ಚಿನ್ನಾಭರಣಗಳಿದ್ದ ಪೊಟ್ಟಣ ತೆರೆದಾಗ ಪ್ರತಿಯೊಂದರಲ್ಲಿ ಕೆಲ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ವ್ಯವಸ್ಥಾಪಕರು, ಕೂಡಲೇ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಂತರಿಕ ವಿಚಾರಣೆ ನಡೆಸಿದಾಗ ಕಿರಣ್ ಮೇಲೆ ಶಂಕೆ ಮೂಡಿದೆ. ಆತನನ್ನು ವಲಯ ಮುಖ್ಯಸ್ಥ ದಿಲೀಪ್ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಕಿರಣ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗ್ರಾಹಕರ ಚಿನ್ನ ಸುರಕ್ಷಿತ, ಆತಂಕ ಬೇಡ: ಡಿಸಿಪಿ