ದಾವಣಗೆರೆ ಅಥವಾ ಹರಿಹರದ ತುಂಗಭದ್ರಾ ನದಿ ತಟದ 2 ಎಕರೆ ಜಾಗದಲ್ಲಿ ಮಾದಿಗ ಮಹಾಸಂಸ್ಥಾನ ಗುರುಪೀಠ ಸ್ಥಾಪನೆ ಹಾಗೂ ನೂತನ ಗುರುಪೀಠದ ಪ್ರಥಮ ಪೀಠಾಧ್ಯಕ್ಷರ ಪೀಠಾರೋಹಣ ಸಮಾರಂಭವನ್ನು ಆ.15ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲು ಮಾದಿಗ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಅಥವಾ ಹರಿಹರದ ತುಂಗಭದ್ರಾ ನದಿ ತಟದ 2 ಎಕರೆ ಜಾಗದಲ್ಲಿ ಮಾದಿಗ ಮಹಾಸಂಸ್ಥಾನ ಗುರುಪೀಠ ಸ್ಥಾಪನೆ ಹಾಗೂ ನೂತನ ಗುರುಪೀಠದ ಪ್ರಥಮ ಪೀಠಾಧ್ಯಕ್ಷರ ಪೀಠಾರೋಹಣ ಸಮಾರಂಭವನ್ನು ಆ.15ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲು ಮಾದಿಗ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಸಮಾಜದ ಸಮಾಲೋಚನಾ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ, ಇಡೀ ಮಾದಿಗ ಸಮಾಜದ ಸಂಘಟನೆ, ಬಲವರ್ಧನೆ ಹಾಗೂ ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಜತೆಗೆ ಸಮಾಜದ ಧ್ವನಿಯಾಗಿ ಮಹಾಸಂಸ್ಥಾನ ಗುರುಪೀಠ ಕಾರ್ಯಾರಂಭಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಗುರುಪೀಠ ಸ್ಥಾಪನೆ ಬಗ್ಗೆ ಕಳೆದ 6 ತಿಂಗಳಿನಿಂದ ಸಮಾಜದ ಎಲ್ಲಾ ನಾಯಕರನ್ನೂ ಭೇಟಿ ಮಾಡಿ, ಚರ್ಚಿಸಿದ್ದೇವೆ. ಹೊಟ್ಟೆಪಾಡಿಗಾಗಿ, ಬ್ರಾಂಡಿ ಶಾಪ್ ಆರಂಭಿಸಲು ನಾವ್ಯಾರೂ ಗುರು ಪೀಠ ಸ್ಥಾಪಿಸಲು ಮುಂದಾಗಿಲ್ಲ. ನಮ್ಮ ಸಮಾಜವೂ ಇತರೆ ಸಮಾಜಗಳಂತೆ ಮುಖ್ಯ ವಾಹಿನಿಯಲ್ಲಿರಬೇಕು. ಈಗ ಇರುವಂತಹ ಹಿರಿಯೂರು ಮತ್ತು ಚಿತ್ರದುರ್ಗ ಮಠದಿಂದ ಮಾದಿಗ
ಸಮಾಜಕ್ಕೆ ಏನು ಅನುಕೂಲವಾಗಿದೆ? ನಾವೂ ಸಹ ದಾವಣಗೆರೆಯಲ್ಲಿ ಈವರೆಗೆ 1350ಕ್ಕೂ ಅದಿಕ ಬಡವರ ಮಕ್ಕಳ ಮದುವೆ ಮಾಡಿದ್ದೇವೆ. ಇಂತಹ ಸಮಾಜಮುಖಿ ಕಾರ್ಯವನ್ನು ನಮ್ಮದೇ ಸಮುದಾಯದ ಮಠಗಳಾಗಲೀ, ಸ್ವಾಮಿಗಳಾಗಲೀ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಮಾದಿಗ ಸಮುದಾಯದ ಮಕ್ಕಳಿಗೆ ಐಎಎಸ್, ಐಪಿಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ತರಬೇತಿ ಕೊಡಿಸಿದ್ದಾರಾ? ಶ್ರೀ ಷಡಕ್ಷರ ಮುನಿ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಬಳಿ ಮುಂಚೆಯೇ ಗುರುಪೀಠ ಸ್ಥಾಪಿಸುವ ಬಗ್ಗೆ, ಉದ್ದೇಶಿತ ಪೀಠಕ್ಕೆ ಬ್ರಹ್ಮಚಾರಿಯಾದ ವಿದ್ಯಾವಂತ ಸ್ವಾಮೀಜಿ ಬೇಕು. ಯಾರಿದ್ದರೂ, ಇಲ್ಲದಿದ್ದರೂ ಸಮಾಜವನ್ನು ಮುನ್ನಡೆಸುವ ಗುರುವಿಗಾಗಿ ನಾವು ಹುಡುಕಾಟ ನಡೆಸಿದ್ದೇವೆ ಎಂದರು.
ಮಾದಿಗ ಚನ್ನಯ್ಯ ಪೀಠ ಸ್ಥಾಪಿಸಲು ಶರಣರು ಮುಂದಾದಾಗ ಆದಿಚುಂಚನಗಿರಿ ಶ್ರೀಗಳು 10 ಲಕ್ಷ ರು. ನೀಡಿ, ಆಶೀರ್ವದಿಸಿದ್ದರು. ಆಗ ಶ್ರೀ ಮಾದಿಗ ಚನ್ನಯ್ಯ ಸ್ವಾಮೀಜಿಗೆ ಕೆಲವರು ವಿರೋಧ ಮಾಡಿದ್ದಾಗ ನಾವೇ ಸ್ವಾಮೀಜಿ ಪರ ನಿಂತಿದ್ದನ್ನು ಮರೆಯಬಾರದು ಎಂದು ಬಿ.ಎಚ್.ವೀರಭದ್ರಪ್ಪ ಎಚ್ಚರಿಸಿದರು.
ಸಮಾಜದ ಹಿರಿಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಹಿರಿಯ ಉಪಾಧ್ಯಕ್ಷರಾದ ಎಚ್.ಮಲ್ಲೇಶ, ಸಹ ಕಾರ್ಯದರ್ಶಿಗಳಾದ ಸಿ.ಬಸವರಾಜ, ಮುಖಂಡರಾದ ಎಲ್.ಡಿ.ಗೋಣೆಪ್ಪ, ಡಿ.ಹನುಮಂತಪ್ಪ, ಆದಾಪುರ ನಾಗರಾಜ, ಜಿ.ರಾಕೇಶ ಗಾಂಧಿ ನಗರ, ಎಲ್.ಎಂ.ಎಚ್.ಸಾಗರ್, ಅಕ್ಕಿ ಬಸವರಾಜ, ಬಿ.ಆರ್.ಮಂಜುನಾಥ, ನಲ್ಲೂರು ಶೇಖರಪ್ಪ, ಕೋಗಲೂರು ಪ್ರಕಾಶ, ಜಿ.ಎಚ್.ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ದಿಡಗೂರು ತಮ್ಮಣ್ಣ, ಮಾರಿಕೊಪ್ಪ ಮಂಜುನಾಥ, ಎ.ಕೆ.ಶಿವರಾಂ, ಎಚ್.ದೇವೇಂದ್ರಪ್ಪ ಹರಿಹರ, ಬಿ.ಆರ್.ಶಿವಮೂರ್ತಿ, ಮಂಜುನಾಥ ಲೋಕಿಕೆರೆ, ಎನ್.ಶಂಕರ, ಎಚ್.ನಾಗರಾಜ, ಬಿ.ಎನ್.ರಂಗಸ್ವಾಮಿ, ಎಚ್.ಸಿ.ಮಲ್ಲಪ್ಪ, ಬಿ.ಡಿ.ಸುರೇಶ ಇತರರು ಇದ್ದರು. ಇದಕ್ಕೂ ಮುನ್ನ ನಡೆದ ಸಮಾಲೋಚನಾ ಸಭೆಯಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಐರಣಿ ಶ್ರೀಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.