ಕೋಟೆಕಾರು ಬ್ಯಾಂಕ್‌ ದರೋಡೆಕೋರರ ಮಾಹಿತಿ ಪೊಲೀಸರಿಗೆ ನೀಡಿದ್ದು ತಂಡದ ಹೊರಗುಳಿದ ಸದಸ್ಯರು!

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ಬಂಧಿತ ಆರೋಪಿಗಳು ಮುಂಬೈನ ಧಾರಾವಿಯ ಗ್ಯಾಂಗ್‌ಗೆ ಸೇರಿದವರು. ಮುಂಬೈ ಮತ್ತು ತಮಿಳುನಾಡಿನಲ್ಲಿ ಧಾರಾವಿಯಲ್ಲಿ ಮೊಸ್ಟ್ ಡೇಂಜರಸ್ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ. ಈ ಹಿಂದೆಯೂ ಹಲವಾರು ದರೋಡೆ ನಡೆಸಿ ಪಳಗಿರುವ ಗ್ಯಾಂಗ್ ಇದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೋಟೆಕಾರು ಬ್ಯಾಂಕ್‌ ದರೋಡೆಯಲ್ಲಿ ಮೂವರು ಆರೋಪಿಗಳು ಸಿಕ್ಕಿಬೀಳಲು ಅವರ ತಂಡದಿಂದ ಹೊರಗೆ ದಬ್ಬಲ್ಪಟ್ಟ ಅಸಮಾಧಾನಿತ ಸದಸ್ಯರು ನೀಡಿದ ಮಾಹಿತಿಯೇ ಕಾರಣ ಎಂಬುದು ಬಹಿರಂಗಗೊಂಡಿದೆ.ಈ ಸದಸ್ಯರಿಗೆ ತಮ್ಮ ತಂಡದ ಇತರೆ ಸದಸ್ಯರು ಮಂಗಳೂರಿನಲ್ಲಿ ಬ್ಯಾಂಕ್‌ ದರೋಡೆ ನಡೆಸುವ ಮಾಹಿತಿ ಇರಲಿಲ್ಲ, ಆದರೆ ಎಲ್ಲೋ ಒಂದು ಕಡೆ ದೊಡ್ಡ ದರೋಡೆ ನಡೆಸಲು ಸಂಚು ರೂಪಿಸಿರುವ ಮಾಹಿತಿ ಇತ್ತು. ಅದರ ಸುಳಿವು ಮುಂಬೈ ಗುಪ್ತಚರ ಪೊಲೀಸರಿಗೆ ಸಿಕ್ಕಿತ್ತು. ಮುಂಬೈನಲ್ಲೇ ದೊಡ್ಡ ಮಟ್ಟದ ದರೋಡೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದರು ಎಂಬ ಸಂಗತಿ ಗೊತ್ತಾಗಿದೆ. ಮಂಗಳೂರಿನ ಕೋಟೆಕಾರು ಬ್ಯಾಂಕ್‌ ದರೋಡೆ ದೊಡ್ಡ ಮಟ್ಟದ ಸುದ್ದಿಯಾದ ಬಳಿಕ ಮಂಗಳೂರು ಪೊಲೀಸರು ಶಂಕೆ ಮೇರೆಗೆ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಆಗ ಮಂಗಳೂರು ಬ್ಯಾಂಕ್‌ ದರೋಡೆ ಹಿಂದಿನ ಕೈವಾಡ ಮುಂಬೈ ದರೋಡೆ ತಂಡದ್ದು ಎಂಬುದು ಪೊಲೀಸರಿಗೆ ಖಚಿತವಾಯಿತು. ಮುಂಬೈ ಪೊಲೀಸರ ನೆರವಿನಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಪಡೆದು ತಮಿಳುನಾಡು ಪೊಲೀಸರ ನೆರವಿನೊಂದಿಗೆ ಮಧುರೈನಲ್ಲಿ ಬಂಧಿಸಲು ಸಾಧ್ಯವಾಗಿದೆ.

ಮೋಸ್ಟ್‌ ಡೇಂಜರಸ್‌ ದರೋಡೆ ಗ್ಯಾಂಗ್‌:

ಕೋಟೆಕಾರು ಬ್ಯಾಂಕ್‌ ದರೋಡೆಗೆ ಸಂಬಂಧಿಸಿ ಮುಂಬೈ ಮೂಲದ ಮುರುಗಂಡಿ ತಿವಾರ್‌(34), ಯೋಶುವಾ ರಾಜೇಂದ್ರನ್ (35) ಮತ್ತು ಕಣ್ಣನ್ ಮಣಿ(36) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇನ್ನು ಉಳಿದ ಆರೋಪಿಗಳ ಪತ್ತೆಗೆ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಬಂಧಿತ ಆರೋಪಿಗಳು ಮುಂಬೈನ ಧಾರಾವಿಯ ಗ್ಯಾಂಗ್‌ಗೆ ಸೇರಿದವರು. ಮುಂಬೈ ಮತ್ತು ತಮಿಳುನಾಡಿನಲ್ಲಿ ಧಾರಾವಿಯಲ್ಲಿ ಮೊಸ್ಟ್ ಡೇಂಜರಸ್ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ. ಈ ಹಿಂದೆಯೂ ಹಲವಾರು ದರೋಡೆ ನಡೆಸಿ ಪಳಗಿರುವ ಗ್ಯಾಂಗ್ ಇದಾಗಿದೆ. ಕೋಟೆಕಾರ್ ದರೋಡೆ ಕೃತ್ಯದ ಮುಖ್ಯ ಕಿಂಗ್ ಪಿನ್ ಮುರುಗಂಡಿ ಆಗಿದ್ದು, ಈತನೇ ದರೋಡೆಯ ಪ್ಲಾನ್ ಸಿದ್ಧಪಡಿಸಿದ್ದ. ಕೋಟೆಕಾರ್ ಬ್ಯಾಂಕ್‌ನ ಬಗ್ಗೆ ಒಂದು ತಿಂಗಳಿನಿಂದ ಮಾಹಿತಿ ಕಲೆ ಹಾಕಿ ದರೋಡೆಗೆ ಪಕ್ಕಾ‌ ಯೋಜನೆ ರೂಪಿಸಿದ್ದ. ಈ ಗ್ಯಾಂಗ್‌ ಮುಂಬಯಿ ಸೇರಿದಂತೆ ದೇಶದ ಇತರ ಭಾಗದಲ್ಲಿ ದರೋಡೆ ಕೃತ್ಯ ಎಸಗಿರುವ ಖತರ್ನಾಕ್ ಗ್ಯಾಂಗ್ ಆಗಿದ್ದು, ಬಂಧಿತ ಆರೋಪಿಗಳ ಹಳೆ ಕೇಸ್‌ಗಳನ್ನು ಪೊಲೀಸ್‌ ತಂಡ ತಡಕಾಡುತ್ತಿದೆ. ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ದರೋಡೆಕೋರರು ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ. ಕಾರಿನಲ್ಲೇ ಪ್ರಯಾಣಿಸಿದ್ದರು. ತಮಿಳುನಾಡಿನ ಮಧುರೈ ನಂತರ ತಿರುನಲ್ವೇಲಿಗೆ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನವನ್ನೂ ಬಚ್ಚಿಟ್ಟು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಆರೋಪಿಗಳ ಜಾಡು ಹಿಡಿದು ಹೊರಟ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆಯಾಗಿತ್ತು. ಕಾರಿನ ಚೇಸಿಸ್ ನಂಬರ್ ಆಧಾರದಲ್ಲಿ ಪೊಲೀಸರು ಕಾರಿನ ನೈಜ ಮಾಲೀಕನ ಮಾಹಿತಿ ಪಡೆದಿದ್ದರು. ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ಆಗಂತುಕರ ಜಾಡು ಪತ್ತೆಯಾಯಿತು. ನಂತರ ತಮಿಳುನಾಡಿನ ಮಧುರೈ ಬಳಿ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಸಫಲರಾದರು.

2 ತಿಂಗಳ ಹಿಂದೆ ಬಂದಿದ್ದ:

ಆರೋಪಿ ಮರುಗಂಡಿ ಚಲಾಯಿಸಿದ್ದು ಮಹಾರಾಷ್ಟ್ರ ಮೂಲದ ಫಿಯೇಟ್ ಕಾರು. ಈ ನಟೋರಿಯಸ್‌ ತಂಡದ ರೂವಾರಿ ಮರುಗಂಡಿ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ನಂತರ ದರೋಡೆಗೆ ಪಕ್ಕಾ ಯೋಜನೆ ರೂಪಿಸಿ ತಂಡದ ಜೊತೆ ಮುರುಗಂಡಿ ಮಂಗಳೂರಿಗೆ ಬಂದಿದ್ದ. ಈ ವೇಳೆ ಆತನ ಜೊತೆ ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ ಅರು ಮಂದಿಯೂ ಆಗಮಿಸಿದ್ದರು. ಫಿಯೇಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು. ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿರುವುದು ಪೊಲೀಸ್‌ ವಿಚಾರಣೆಯಿಂದ ಬಯಲಾಗಿದೆ. ಮುಂಬೈನಲ್ಲೇ ಸ್ಕೆಚ್‌:

ಕೋಟೆಕಾರು ಬ್ಯಾಂಕ್ ದರೋಡೆಗೆ ಮುಂಬೈನಲ್ಲಿ ಕುಳಿತು ಸ್ಕೆಚ್ ರೂಪಿಸಿದ್ದ ಧಾರಾವಿ ಗ್ಯಾಂಗ್, ದರೋಡೆ ಕೃತ್ಯಕ್ಕೆ ಕೇವಲ ಆರು ಮಂದಿಯನ್ನಷ್ಟೆ ಸಿದ್ಧಪಡಿಸಿತ್ತು. ಕಾರ್ಯಾಚರಣೆ ತಂಡ, ದಿನ ಹಾಗೂ ಸಮಯ ಎಲ್ಲವೂ ಮುಂಬೈನಲ್ಲೇ ಅಂತಿಮವಾಗಿತ್ತು. ಮಂಗಳೂರಿನಿಂದ ಈ ಬಗ್ಗೆ ಪೂರಕ ಮಾಹಿತಿಗಳನ್ನು ಪಡೆದೇ ಈ ತಂಡ ದರೋಡೆ ಯೋಜನೆ ರೂಪಿಸಿತ್ತು ಎಂದು ಮೂಲಗಳು ಹೇಳುತ್ತಿವೆ. ಈ ವೇಳೆ ಒಂದಿಬ್ಬರನ್ನು ದರೋಡೆ ಕಾರ್ಯಾಚರಣೆಗೆ ಮುನ್ನವೇ ತಂಡದಿಂದ ಮುರುಗಂಡಿ ಹೊರಗಿಟ್ಡಿದ್ದ. ಹೀಗಾಗಿ ತಂಡದಿಂದ ಹೊರಗಿದ್ದವನಿಂದ ದರೋಡೆ ಮಾಹಿತಿ ಬಹಿರಂಗಗೊಂಡಿದೆ ಎಂದೇ ಹೇಳಲಾಗುತ್ತಿದೆ.

ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಮಾಡಿ ಎರಡು ಕಾರ್‌ಗಳಲ್ಲಿ ಪರಾರಿಯಾಗಿದ್ದ ಈ ದರೋಡೆಕೋರರು

ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ನಾನಾ ಮಾರ್ಗ ಬಳಸಿದ್ದರು. ಕೃತ್ಯಕ್ಕೆ ಬಳಸಿದ್ದ ಫಿಯಟ್ ಕಾರು ಬೆನ್ನಟ್ಟಿದ್ದದ ಮಂಗಳೂರು ಪೊಲೀಸರು ಕೊನೆಗೂ ಅದರಲ್ಲಿ ಪರಾರಿಯಾದವರನ್ನು ಬಂಧಿಸಿದ್ದಾರೆ. ಮತ್ತೊಂದು ಕಾರಿಗಾಗಿ ಪೊಲೀಸರ ತಲಾಶೆ ಮುಂದುವರಿದಿದೆ.

Share this article