ಅಸಂಘಟಿತ ಕಾರ್ಮಿಕರು ಸರ್ಕಾರಿ ಸೌಲಭ್ಯ ಪಡೆಯಲಿ: ರಮೇಶ ಸುಂಬಡ

KannadaprabhaNewsNetwork |  
Published : Jan 22, 2025, 12:32 AM IST
ಮಹಾಲಿಂಗಪುರದ ರಾಜ್ಯ ನೇಕಾರ ಸೇವಾ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಬಿತ್ತಿ ಪತ್ರ ಪ್ರದರ್ಶಿಸಿದರು. | Kannada Prabha

ಸಾರಾಂಶ

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಅಸಂಘಟಿತ ಕಾರ್ಮಿಕರ ಉದ್ಧಾರಕ್ಕಾಗಿ ತುಂಬಾ ಆಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕಿಂತ ಹೆಚ್ಚು ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)

ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆಯಬೇಕು. ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ ಹೇಳಿದರು.

ಸ್ಥಳೀಯ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ವಿವಿಧ ವೃತ್ತಿಯಲ್ಲಿ ತೊಡಗಿದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಅಸಂಘಟಿತ ಕಾರ್ಮಿಕರ ಉದ್ಧಾರಕ್ಕಾಗಿ ತುಂಬಾ ಆಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕಿಂತ ಹೆಚ್ಚು ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಇಲಾಖೆ ಗಮನಕ್ಕೆ ತರಲು ಸಹಾಯವಾಣಿ ೧೫೫೨೧೪ ಮತ್ತು ೧೦೯೮ ಕರೆ ಮಾಡಬೇಕು ಎಂದು ಹೇಳಿದರು.

ಹಮಾಲುರು, ಚಿಂದಿ ಆಯುವವರು, ಮನೆಗಳಿಗೆ ತೆರಳಿ ಕೆಲಸ ಮಾಡುವವರು, ಟೇಲರ್‌, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಬಟ್ಟೆ ಕಾರ್ಮಿಕರು, ನೇಕಾರರು, ಪತ್ರಿಕಾ ವಿತರಕರು, ಅಲೆಮಾರಿ ಪಂಗಡದವರು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ ಕಾರ್ಮಿಕರು, ಸಭಾಭವನ, ಟೆಂಟ್‌, ಪೆಂಡಾಲ್‌ ಕೆಲಸ ನಿರ್ವಹಿಸುವ ಕಾರ್ಮಿಕರು, ಸ್ವತಂತ್ರ ಲೇಖನ ಬರಹಗಾರರು, ಫೋಟೋಗ್ರಾಫರ್, ಹೋಟೆಲ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು, ಫೂಡ್ ರೈರ್ಸ್‌, ಖಾಸಗಿ ವಾಣಿಜ್ಯ ಚಾಲಕರು, ಮೇದಾರರು, ಭಜಂತ್ರಿ ಇವರೆಲ್ಲರನ್ನೂ ಅಸಂಘಟಿಕ ಕಾರ್ಮಿಕರ ವ್ಯಾಪ್ತಿಯಲ್ಲಿ ತರಲಾಗಿದೆ. ಇಎಸ್‌ಐ, ಪಿಎಫ್ ಮತ್ತು ತೆರೆಗೆ ಕಟ್ಟದವರು ಈ ಕೆಟಗರಿಯಲ್ಲಿ ಸೇರುತ್ತಾರೆ.

ಈ ಎಲ್ಲ ಕೆಟಗರಿ ಕಾರ್ಮಿಕರ ಆರ್ಥಿಕ ಪ್ರಗತಿಗೆ ಹಾಗೂ ಸಾಮಾಜಿಕ ಭದ್ರತೆಗೆ ಸರ್ಕಾರ ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆಯಡಿ ಮಂಡಳಿ ನಿರ್ಮಾಣ ಮಾಡಿದೆ. ಈ ಮಂಡಳಿಯಲ್ಲಿ ಸುಮಾರು ₹೫೪ ಕೋಟಿ ಮೀಸಲಿಡಲಾಗಿದೆ. ನೇಕಾರರು ಗ್ಯಾರೇಜ್‌ ಕಾರ್ಮಿಕರು, ಟೇಲರ್‌ಗಳು ಮುಂತಾದವರು ಕಾರ್ಮಿಕ ಇಲಾಖೆಯಿಂದ ಹೊರಡಿಸಲಾದ ವೆಬ್‌ಸೈಟ್‌ನಲ್ಲಿ ತಮ್ಮ ಫೋಟೋ ಆಧಾರ ಕಾರ್ಡ್‌, ರೇಷನ್ ಕಾರ್ಡ್‌, ಬ್ಯಾಂಕ್‌ ಪಾಸ್ ಬುಕ್ ಹಾಕಬೇಕು. ಕಾರ್ಮಿಕ ಕಾರ್ಡ್‌ ಆಗುವವರೆಗೂ ಸ್ಮಾರ್ಟ ಕಾರ್ಡ್‌ ನೀಡಲಾಗುವುದು. ಈ ಕಾರ್ಡ್‌ ಪಡೆದ ಕಾರ್ಮಿಕ ಅಪಘಾತದಲ್ಲಿ ನಿಧನರಾದರೆ ₹೧ ಲಕ್ಷ, ಗಾಯಗೊಂಡರೆ ₹೫೦ ಸಾವಿರ, ಸಹಜ ಮರಣ ಹೊಂದಿದರೆ ₹೧೦ ಸಾವಿರ ನೀಡಲಾಗುವುದು. ಕಾರಣ ಅಸಂಘಟಿತ ಕಾರ್ಮಿಕರು ಪ್ರತಿಯೊಬ್ಬರೂ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬೇಕು ಎಂದರು.

ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರು ಅಸಂಘಟಿತ ಕಾರ್ಮಿಕರ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದು ರಾಜ್ಯಾದ್ಯಂತ ೪೫ ರಿಂದ ೫೦ ಲಕ್ಷ ಕಾರ್ಮಿಕರ ನೋಂದಣಿ ಮಾಡಿ ಹಲವು ಸೌಲಭ್ಯಗಳನ್ನು ನೀಡುವ ಉದ್ದೇಶ ಹೊಂದಿದ್ದಾರೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ನೇಕಾರ ಮುಖಂಡ ರಾಜೇಂದ್ರ ಮಿರ್ಜಿ, ಸೋಮು ಮರೆಗುದ್ದಿ, ನಾಗಪ್ಪ ಮುದಕವಿ, ಶಂಕರ ಶಿರೋಳ, ಗಿರಿಮಲ್ಲ ಕೈಸೊಲಗಿ, ಸದಾಶಿವ ಮುನ್ನೊಳ್ಳಿ, ಈರಪ್ಪ ಮುದಕವಿ, ಶಂಭು ಕೈಸೊಲಗಿ, ನಾಗಪ್ಪ ಯಾದವಾಡ, ಹಾಜಿಸಾಬ ನಾಲಬಂದ, ಶ್ರೀಶೈಲ ಬ್ಯಾಕೋಡ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!