ಸ್ಮಾರ್ಟ್‌ಸಿಟಿ ಕಾಮಗಾರಿ ತೃಪ್ತಿದಾಯಕವಾಗಿಲ್ಲ, ಹಸ್ತಾಂತರ ಮಾಡಿಕೊಂಡಿಲ್ಲ: ಮಹಾನಗರ ಪಾಲಿಕೆ ಆಯುಕ್ತ

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ವೀರಣ್ಣ ಸವಡಿ ಕೂಡ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವೈಜ್ಞಾನಿಕ ಕಾಮಗಾರಿಗಳು, ಕಳಪೆ, ನಿರ್ವಹಣೆ ಸಂಬಂಧಿಸಿದಂತೆ ಹಿಂದಿನ ಮೇಯರ್ ಆಕ್ಷೇಪ ವ್ಯಕ್ತಪಡಿಸಿ ಲೋಕಾಯುಕ್ತಕ್ಕೂ ಪತ್ರ ಬರೆದಿದ್ದರು. ಆದರೆ, ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ.

ಹುಬ್ಬಳ್ಳಿ:

ಸ್ಮಾರ್ಟ್‌ಸಿಟಿಯ 68 ಯೋಜನೆಗಳಲ್ಲಿ 8 ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲದ ಕಾರಣಕ್ಕೆ ಹಸ್ತಾಂತರ ಮಾಡಿಕೊಂಡಿಲ್ಲ. ಈ ಕುರಿತು ಸ್ಮಾರ್ಟ್‌ಸಿಟಿ ಕಂಪನಿಗೆ ಲಿಖಿತವಾಗಿ ತಿಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತೋಳನಕೆರೆ, ಗ್ಲಾಸ್‌ಹೌಸ್, ನೆಹರು ಸ್ಟೆಡಿಯಂ ಸೇರಿದಂತೆ 8 ಯೋಜನೆ ಕಾಮಗಾರಿಯ ಬಹಳಷ್ಟು ವಿಷಯಗಳಲ್ಲಿ ತೃಪ್ತಿಕರವಾಗಿಲ್ಲ. ಅತೃಪ್ತಿಗೆ ಕಾರಣಗಳ ಸಹಿತ ಸ್ಮಾರ್ಟ್‌ಸಿಟಿಗೆ ಪತ್ರ ಬರೆಯಲಾಗಿದೆ ಎಂದರು.

ವೀರಣ್ಣ ಸವಡಿ ಕೂಡ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವೈಜ್ಞಾನಿಕ ಕಾಮಗಾರಿಗಳು, ಕಳಪೆ, ನಿರ್ವಹಣೆ ಸಂಬಂಧಿಸಿದಂತೆ ಹಿಂದಿನ ಮೇಯರ್ ಆಕ್ಷೇಪ ವ್ಯಕ್ತಪಡಿಸಿ ಲೋಕಾಯುಕ್ತಕ್ಕೂ ಪತ್ರ ಬರೆದಿದ್ದರು. ಆದರೆ, ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಫಿಶ್ ಮಾರ್ಕೇಟ್ ಮತ್ತು 1547 ವಾಣಿಜ್ಯ ಮಳಿಗೆಗಳು ಹರಾಜು ಮಾಡಲಾಗುತ್ತದೆ. ಇದಲ್ಲದೇ 2700 ಲೀಸ್ ಪಾಪರ್ಟಿ ಹರಾಜು ಇಲ್ಲವೇ ಮಾರಾಟ ಮಾಡುವ ಕುರಿತು ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಇದರಿಂದ ₹ 500 ಕೋಟಿ ಪಾಲಿಕೆಗೆ ಆದಾಯ ಹರಿದು ಬರುವ ನಿರೀಕ್ಷೆ ಎಂದರು.

ಕೈಗಾರಿಕೆ ವಸಾಹತು ಪ್ರದೇಶ ಹಾಗೂ ಕೆಎಚ್‌ಬಿ ಹಾಗೂ ಖಾಸಗಿ ಲೇಔಟ್‌ಗಳನ್ನು ಹಸ್ತಾಂತರಿಸಿಕೊಳ್ಳುವ ಕುರಿತಂತೆ ಜ. 23ರಂದು ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುತ್ತಿದ್ದು, ₹ 50 ಕೋಟಿ ಆದಾಯ ಬರಲಿದೆ. ಅಲ್ಲದೇ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಲಿದೆ. ಪ್ರಾಪರ್ಟಿ ಟ್ಯಾಕ್ಸ್‌ನಿಂದ ಹೊರಗಿರುವ ಆಸ್ತಿಗಳಿಗೆ ಬಿ ಖಾತಾ ನೀಡಿ ಇ-ಸ್ವತ್ತು ಪೂರೈಸುವ ವ್ಯವಸ್ಥೆ ಬಿಬಿಎಂಪಿಯಲ್ಲಿ ಜಾರಿಯಲ್ಲಿದ್ದು. ಇತರ ಪಾಲಿಕೆಗಳಲ್ಲೂ ವ್ಯವಸ್ಥೆ ಅನುಷ್ಠಾನಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ ಪಾಲಿಕೆಗೆ ನಿರಂತರ ಆದಾಯ ದೊರೆಯಲಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ರೈಲ್ವೆ ಆಸ್ತಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಏರ್‌ಪೋರ್ಟ್ ಸೇರಿದಂತೆ ಹಲವು ಸಂಸ್ಥೆಗಳ ಆಸ್ತಿ ಸರ್ವೇ ಆರಂಭಿಸಲಾಗಿದೆ. ಈಗಾಗಲೇ ನೈಋತ್ಯ ರೈಲ್ವೆ ಹಾಗೂ ಪಾಲಿಕೆ ಅಧಿಕಾರಿಗಳ ಜಂಟಿ ಸಮೀಕ್ಷೆ ಮುಂದುವರಿದಿದೆ. ಇದರಂತೆ ಶಿಕ್ಷಣ ಸಂಸ್ಥೆಗಳು ಮತ್ತು ಏರಪೋರ್ಟ್‌ನಿಂದ ತೆರಿಗೆ ಬಾಕಿ ಇದ್ದು, ಸರ್ವೇ ಮಾಡಿ ತೆರಿಗೆ ವಸೂಲು ಮಾಡಲಾಗುವುದು ಎಂದು ಹೇಳಿದರು.

ಹಿರಿಯ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎಲ್‌ಇಡಿ ಪ್ರಾಜೆಕ್ಟ್ ಅನುಷಾನಕ್ಕೆ ಕಾಲ ಕೂಡಿ ಬಂದಿದ್ದು, ಟೆಂಡರ್ ಓಪನ್ ಆಗಲಿದೆ. ಅದೇ ರೀತಿ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಭೌಗೋಳಿಕ ಸರ್ವೇ ಕೂಡಿ ಟೆಂಡರ್ ಹಂತದಲ್ಲಿದ್ದ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸಭಾಭವನ ನಿರ್ಮಾಣಕ್ಕೆ ಸರ್ಕಾರ ವಿಶೇಷ ಅನುದಾನ ಕೊಡದಿದ್ದರೆ ಪಾಲಿಕೆಯಿಂದಲೇ ಹಂತ-ಹಂತವಾಗಿ ನಿರ್ಮಿಸಲಾಗುವುದು ಎಂದರು.

ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗೆ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಹು-ಧಾ ಪಾಲಿಕೆ ಗಡಿ ವಿಸ್ತರಣೆ ಕಾರ್ಯವನ್ನು ತಡೆ ಹಿಡಿಯಲಾಗಿದೆ. ಹುಬ್ಬಳ್ಳಿ ಪಾಲಿಕೆಗೆ ಸಂಬಂಧಿಸಿ ಗಡಿ ಗುರುತು ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

Share this article