ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ತಾಲೂಕಿನ ಇಂಡ್ಲವಾಡಿ ಗ್ರಾಮದ 75 ಎಕರೆ ವಿಸ್ತೀರ್ಣದಲ್ಲಿ ಬರೋಬ್ಬರಿ 2,350 ಕೋಟಿ ರು. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ.

 ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ತಾಲೂಕಿನ ಇಂಡ್ಲವಾಡಿ ಗ್ರಾಮದ 75 ಎಕರೆ ವಿಸ್ತೀರ್ಣದಲ್ಲಿ ಬರೋಬ್ಬರಿ 2,350 ಕೋಟಿ ರು. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ.

ಕರ್ನಾಟಕ ಗೃಹ ಮಂಡಳಿ ಬೆಂಗಳೂರು ಸೂರ್ಯನಗರ 4ನೇ ಹಂತದ ಬಡಾವಣೆಯ ಸಮಗ್ರ ಅಭಿವೃದ್ಧಿ ಯೋಜನೆಯಡಿ ಸ್ಟೇಡಿಯಂ ನಿರ್ಮಿಸಲು ಮುಂದಾಗಿದ್ದು, 80,000 ಆಸನ ವ್ಯವಸ್ಥೆ ಮೂಲಕ ದೇಶದ ಅತಿ ದೊಡ್ಡ ಸ್ಟೇಡಿಯಂಗಳಲ್ಲಿ ಒಂದಾಗಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್‌, ಚಿನ್ನಸ್ವಾಮಿ ಕ್ರೀಡಾಂಗಣ ಹಳೆಯದಾಗಿದ್ದು 38,000 ಆಸನ ವ್ಯವಸ್ಥೆ ಮಾತ್ರ ಹೊಂದಿದೆ. ಬೆಂಗಳೂರಿಗಿಂತ ಚಿಕ್ಕ ನಗರಗಳಲ್ಲಿ ದೊಡ್ಡ ಸ್ಟೇಡಿಯಂಗಳು ಇವೆ. ಹೀಗಾಗಿ ಆಧುನಿಕ ಸೌಲಭ್ಯಗಳು, ಇಂದಿನ ಕ್ರೀಡಾ ಅಗತ್ಯತೆಗೆ ಅನುಸಾರವಾಗಿ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ:

ಸಂಗೀತ ಕಛೇರಿಗಳು ಮತ್ತು ಸಾರ್ವಜನಿಕ ಕೂಟಗಳಂತಹ ಕ್ರೀಡೆ ಹೊರತಾದ ಕಾರ್ಯಕ್ರಮಗಳಿಗೆ ಕ್ರೀಡಾ ಮೈದಾನ ಬಳಸಿಕೊಳ್ಳಲು ಅನುವಾಗುವಂತೆ ವಿನ್ಯಾಸ ಮಾಡಲಾಗುವುದು. ಸಾರ್ವಜನಿಕ ಪ್ರವೇಶ/ನಿರ್ಗಮನ ನಿರ್ವಹಣೆ, ತುರ್ತು ಸ್ಥಳಾಂತರಿಸುವ ವ್ಯವಸ್ಥೆ ಸೇರಿ ಸಾರ್ವಜನಿಕ ಸುರಕ್ಷತೆ, ಜನಸಂದಣಿ ನಿಯಂತ್ರಣ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಕನ್ನಡ ಕಡ್ಡಾಯ

ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆ ಹಂತದಲ್ಲಿಯೇ 150 ಅಂಕಗಳ ಕನ್ನಡ ಭಾಷಾ ಪರೀಕ್ಷೆಯ ಅರ್ಹತಾ ಪರೀಕ್ಷೆ ತೇರ್ಗಡೆಯಾಗಿರುತ್ತಾರೆ. ಹೀಗಾಗಿ ನೇಮಕಾತಿ ನಂತರ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಬೇಕೆಂಬ ಪ್ರಸ್ತಾವನೆಗೆ ಅಂಗೀಕಾರ ನೀಡಲು ಸಚಿವ ಸಂಪುಟ ನಿರಾಕರಿಸಿದೆ.

ತನ್ಮೂಲಕ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆಗೆ ನೇಮಕವಾದವರಿಗೂ ಕನ್ನಡ ಪರೀಕ್ಷೆ ಕಡ್ಡಾಯ ನಿಯಮ ಮುಂದುವರೆಸಿದೆ. ಕರ್ನಾಟಕ ಸಿವಿಲ್‌ ಸೇವೆಗಳು (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) (ತಿದ್ದುಪಡಿ) ನಿಯಮ- 2025ಕ್ಕೆ ಅನುಮೋದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದು, ಅವರೂ ಕನ್ನಡ ಪರೀಕ್ಷೆ ಬರೆಯಲಿ ಎಂದಿದ್ದಾರೆ. ಹೀಗಾಗಿ ಸಂಪುಟವು ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಇತರೆ ತೀರ್ಮಾನಗಳು:

- ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ₹13.98 ಕೋಟಿ ವೆಚ್ಚದಲ್ಲಿ 2.79 ಲಕ್ಷ ಸೀರೆ ಖರೀದಿಸಲು ತೀರ್ಮಾನ.

- ರಾಜ್ಯದ 69922 ಅಂಗನವಾಡಿ ಕೇಂದ್ರಗಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪ್ರತಿ ಔಷಧ ಕಿಟ್‌ಗೆ ₹1,500 ವೆಚ್ಚಿಸಿ ₹10.49 ಕೋಟಿ ಮೊತ್ತದಲ್ಲಿ ಔಷಧ ಕಿಟ್‌ ನೀಡಲು ಅನುಮೋದನೆ.