ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 12 ಮಂದಿ ಲೂಟಿಕೋರರ ಪೈಕಿ 4 ಆರೋಪಿಗಳನ್ನು ಡಿವೈಎಸ್ಪಿ ರವಿ ನೇತೃತ್ವದಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ದನ್ ತಂಡ ಬಂಧಿಸಿದೆ. ಈ ಮುಂಚೆ ಹಿಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ ತಂಡ ಮೂವರು ಖದೀಮರನ್ನು ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್‌ನಲ್ಲಿ ಬಂಧಿಸಿದ್ದರು. ಹೀಗಾಗಿ ಬಂಧಿತರ ಸಂಖ್ಯೆ 7ಕ್ಕೇರಿದೆ.
ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉತ್ತರಪ್ರದೇಶ ಮೂಲದ ಗುಡ್ಡು ಅಲಿಯಾಸ್ ಕಾಲಿಯಾ, ಕಮ್ರುದ್ದೀನ್ ಅಲಿಯಾಸ್ ಬಾಬು ಸರೇಲಿ, ಸರ್ತಾಜ್, ಹಸ್ರತ್ ಅಲಿ, ಅಸ್ಲಮ್ ಅಲಿಯಾಸ್ ಟನ್ ಟನ್ ಬಂಧಿತರು.ದಾವಣಗೆರೆಯಲ್ಲಿ ನಡೆದಿದ್ದ ಕಳವು ಬ್ಯಾಂಕ್ ಕಳವು ಪ್ರಕರಣದಲ್ಲಿ ಈ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಮುಂಚೆ ಹೊಸಹಳ್ಳಿ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳು ನೀಡಿದ್ದ ಹೆಸರು ಆಧಾರದ ಮೇಲೆ ಈ ನಾಲ್ವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಹೊಸಹಳ್ಳಿ ಪೊಲೀಸರು ವಶಕ್ಕೆ ಪಡೆದು ಕರೆತಂದಿದ್ದಾರೆ.
ಪ್ರಸ್ತುತ ಹೊಸಹಳ್ಳಿ ಬ್ಯಾಂಕ್ ಲೂಟಿ ಪ್ರಕರಣದ 12 ಮಂದಿ ಆರೋಪಿಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದ್ದು, ಉಳಿದ 5 ಮಂದಿ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಆದರೆ ಈವರೆಗೆ ಕಳುವಾದ ಚಿನ್ನಾಭರಣ, ನಗದು ಪತ್ತೆಯಾಗಿಲ್ಲ.
2022ರ ನವೆಂಬರ್ 25 ರಂದು ಸಿನಿಮೀಯ ಶೈಲಿಯಲ್ಲಿ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಾಗಿಲನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಸುಮಾರು ₹3.50 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಸುಮಾರು ₹14 ಲಕ್ಷ ನಗದು ಲೂಟಿ ಮಾಡಿ ಪರಾರಿಯಾಗಿದ್ದರು.
ಇಷ್ಟೊಂದು ದೊಡ್ಡ ಮೊತ್ತದ ಚಿನ್ನಾಭರಣಗಳನ್ನು ತಾಲೂಕು ಕೇಂದ್ರದಿಂದ 22 ಕಿ.ಮೀ ದೂರದ ಹಳ್ಳಿಯಲ್ಲಿನ ಬ್ಯಾಂಕಿನಲ್ಲಿ ಇಡುವ ಅಗತ್ಯ ಇರಲಿಲ್ಲ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕನಿಷ್ಠ ಮುನ್ನೆಚ್ಚರಿಕೆಯನ್ನಾದರು ವಹಿಸಬೇಕಿತ್ತು ಎನ್ನುವ ಮಾತುಗಳು ಪೊಲೀಸರು ಹಾಗೂ ಬ್ಯಾಂಕಿನ ಗ್ರಾಹಕರಿಂದ ಕೇಳಿಬಂದಿತ್ತು. ಈ ಕುರಿತು ಗ್ರಾಹಕರು ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಕಳುವಾದ ಒಡವೆಗಳ ಬದಲಿಗೆ ಹಣ ಪಡೆದಿದ್ದರು.